News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ




ನಮ್ಮ ಸೋಮಣ್ಣ

ಎರಡು ಮಹಾ ಚೇತನಗಳ ಆಶೀರ್ವಾದದ ಬಲ...

ಆದಿಚುಂಚನಗಿರಿ ಮಠದ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ಮತ್ತು ಸಿದ್ಧಗಂಗಾಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಸಾರ್ಥಕ ಒಡನಾಟ......

ಆದಿಚುಂಚನಗಿರಿ ಮಠದ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಮತ್ತು ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಅಪಾರ ಪ್ರೀತಿ ವಿಶ್ವಾಸಕ್ಕೆ ಶ್ರೀ ವಿ ಸೋಮಣ್ಣ ಅವರು ಪಾತ್ರರಾಗಿದ್ದರು. ಶ್ರೀ ಸೋಮಣ್ಣ ಅವರ ಜೀವನ ಮತ್ತು ರಾಜಕೀಯ ಬದುಕಿನ ಹಾದಿಯಲ್ಲಿ ಈ ಇಬ್ಬರು ಮಹಾ ಚೇತನಗಳ ಆಶೀರ್ವಾದ ಅತ್ಯಂತ ಅಮೂಲ್ಯ ಮತ್ತು ದಾಖಲಾರ್ಹವಾಗಿದೆ.

ವಿ ಸೋಮಣ್ಣ ಅವರು ಜಾತಿಯಲ್ಲಿ ವೀರಶೈವರಾಗಿದ್ದರೂ ಒಕ್ಕಲಿಗ, ಕುರುಬ, ಹಿಂದುಳಿದ, ಪರಿಶಿಷ್ಟ ವರ್ಗ ಸೇರಿದಂತೆ ಎಲ್ಲ ಸಮುದಾಯಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇದು ಸೋಮಣ್ಣ ಅವರ ವಿಶಾಲ ಹೃದಯ ಮತ್ತು ವಿನಮ್ರ ವ್ಯಕ್ತಿತ್ವಕ್ಕೆ ಸಾಕ್ಷಿ.

ಕಾರ್ಪೊರೇಷನ್ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೆ ಇವರಿಗೆ ಅಭಯ, ಧೈರ್ಯ, ಸ್ಥೈರ್ಯ ತುಂಬಿದವರು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು.

ವಿಜಯನಗರ ವಾರ್ಡ್ ನಿಂದ ಎರಡು ಬಾರಿ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದಾಗಲೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಆಶೀರ್ವಾದವಿತ್ತು. ಆ ಬಳಿಕ ಬಿನ್ನಿಪೇಟೆಯಿಂದ ವಿಧಾನಸಭೆಗೆ ಸ್ಪರ್ಧಿಸಿದಾಗಲೂ ಸ್ವಾಮೀಜಿ ಬೆಂಬಲಿಸಿದ್ದರು. ಮುಂದಿನ ಬಾರಿ, ಜನತಾದಳ ವಿಭಜನೆ ಮತ್ತು ಬಂಡಾಯದ ಗೊಂದಲದ ಮಧ್ಯೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಬಯಸಿದ ಪಕ್ಷದಿಂದ ಟಿಕೆಟ್ ಸಿಗಲಾರದಂಥ ಸನ್ನಿವೇಶ ಎದುರಾದಾಗ ''ನೀನು ಪಕ್ಷೇತರನಾಗಿ ನಾಮಪತ್ರ ಸಲ್ಲಿಸು. ನಿನಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನೀನು ಗೆದ್ದೇ ಗೆಲ್ಲುತ್ತೀಯಾ,'' ಎಂದು ಧೈರ್ಯ ತುಂಬಿ ಚುನಾವಣೆ ಕಣಕ್ಕೆ ಕಳಿಸಿದವರೇ ಆದಿಚುಂಚನಗಿರಿ ಸ್ವಾಮೀಜಿ. ದೇವೇಗೌಡರ ಪ್ರತಿರೋಧದ ನಡುವೆಯೇ ಸೋಮಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಂಡ ಜಯ ದಾಖಲಿಸಿದ್ದರ ಹಿಂದೆ ದೊಡ್ಡ ಪ್ರಮಾಣದ ಒಕ್ಕಲಿಗ ಮತದಾರರ ಬೆಂಬಲವಿತ್ತು.

ಸೋಮಣ್ಣ ಅವರು ಕೂಡ ಅಷ್ಟೇ. ಒಕ್ಕಲಿಗರ ಆರಾಧ್ಯದೈವರಾಗಿದ್ದ ಆದಿಚುಂಚನಗಿರಿ ಶ್ರೀಗಳಿಗೆ ನಿಷ್ಠರಾಗಿದ್ದರು. ಸ್ವಾಮೀಜಿಯವರು ಕಣ್ಣ ಇಶಾರೆಯಲ್ಲೇ ಒಂದು ಕೆಲಸ ಹೇಳಿದರೆ ಸಾಕು. ನಿಷ್ಠೆ ಮತ್ತು ಶ್ರದ್ಧೆಯಿಂದ ಆ ಕಾರ್ಯ ಮಾಡಿ ಕೊಡುತ್ತಿದ್ದರು. ಹಾಗಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ವಿ ಸೋಮಣ್ಣ ಅವರ ನಡುವೆ ಅವಿನಾಭಾವ ಸಂಬಂಧ ಬೆಳೆದಿತ್ತು.

ಆದಿಚುಂಚನಗಿರಿ ಸ್ವಾಮೀಜಿಗಳ 25ನೇ ಪೀಠಾರೋಹಣ ಸಮಾರಂಭದ ಸಿದ್ಧತೆಯಲ್ಲಿ ಸೋಮಣ್ಣ ಅವರೂ ಸಕ್ರಿಯರಾಗಿ ಭಾಗಿಯಾಗಿದ್ದರು. ಆ ಸಮಾರಂಭದಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅವರು ಆಗಮಿಸಿದ್ದರು. ಆ ಸಮಾರಂಭದಲ್ಲಿನ ಸ್ವಾರಸ್ಯಕರ ಸಂಗತಿಗಳನ್ನು ವಿ ಸೋಮಣ್ಣ ಅವರು ಹೀಗೆ ವಿವರಿಸುತ್ತಾರೆ:

ಆಗ ಮುಖ್ಯಮಂತ್ರಿ ಆಗಿದ್ದ ಎಚ್ ಡಿ ದೇವೇಗೌಡ ಅವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಾಯಿಬಾಬಾ ಅವರು ದೇವೇಗೌಡರನ್ನು ಉದ್ದೇಶಿಸಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ದೇವೇಗೌಡರೇ ಎಂದು ಬಿಟ್ಟರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಾಯಿಬಾಬಾ ಕಿವಿಯಲ್ಲಿ, ಪ್ರಧಾನಮಂತ್ರಿ ಅಲ್ಲ ಮುಖ್ಯಮಂತ್ರಿ ಅಂದರು. ಅಷ್ಟು ಹೇಳಿದ ಮೇಲೂ ಸಾಯಿಬಾಬಾ ಅವರು ಮತ್ತೊಮ್ಮೆ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ದೇವೇಗೌಡರೇ ಎಂದು ಹೇಳಿದರು! ಇದನ್ನು ಕೇಳಿ ದೇವೇಗೌಡರು ಅಪಾರ ಸಂತಸ ಪಟ್ಟರು. ಬಳಿಕ ದೇವೇಗೌಡರ ಬಳಿ ಬಂದು ಎರಡೂ ಕೈಯಿಂದ ಆಶೀರ್ವಾದ ಮಾಡಿದರು‌. ದೇವೇಗೌಡರ ಮೇಲೆ ಪವಾಡವೆಂಬಂತೆ ವಿಭೂತಿಯ ಮಳೆಯಾಯಿತು! ನಾನು ಎದುರಾದಾಗ ಸಾಯಿಬಾಬಾ, ನೀನು ಮಂತ್ರಿ ಆಗ್ತಿಯಾ ಎಂದರು. ಕೆಲವೇ ತಿಂಗಳೊಳಗೆ ಸಾಯಿಬಾಬಾ ಹೇಳಿದಂತೆಯೇ ಆಯಿತು. ದೇವೇಗೌಡರು ಪ್ರಧಾನಿಯಾದರು. ನಾನು ಜೆ ಎಚ್ ಪಟೇಲ್ ಸಂಪುಟದಲ್ಲಿ ಮಂತ್ರಿಯಾದೆ!









ನಮ್ಮ ಸೋಮಣ್ಣ


ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಜತೆ...

ನನಗೆ ರಾಜಕೀಯ ಶಕ್ತಿ ತುಂಬಿದವರೇ ಆದಿ ಚುಂಚನಗಿರಿ ಶ್ರೀಗಳು. ನನ್ನ ರಾಜಕೀಯ ಏಳಿಗೆಯಲ್ಲಿ ಅವರ ಕೊಡುಗೆಯನ್ನು ಎಂದೂ ಮರೆಯಲಾರೆ. ನಾನು ಕಷ್ಟ ನಷ್ಟ ಎದುರಿಸಿದಾಗಲೆಲ್ಲ, ನೊಂದಾಗಲೆಲ್ಲ ನನ್ನ ಕೈ ಹಿಡಿದು ಮೇಲಕ್ಕೆತ್ತಿದವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು. ನಾನೂ ಅಷ್ಟೆ. ಆದಿ ಚುಂಚನಗಿರಿ ಮಠದ ಏನೇ ಕೆಲಸ ಕಾರ್ಯಗಳಿದ್ದರೂ ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದೆ ಎಂದು ಸೋಮಣ್ಣ ಅವರು ನೆನಪಿಸಿಕೊಳ್ಳುತ್ತಾರೆ.

ಆದಿಚುಂಚನಗಿರಿ ಸ್ವಾಮೀಜಿ ಅವರು ಸೋಮಣ್ಣ ಅವರನ್ನು ಹೀಗೆ ಬಣ್ಣಿಸಿದ್ದರು:

ಸೋಮಣ್ಣ ಅವರು ಪ್ರೀತಿ, ವಿಶ್ವಾಸ, ಅನುಕಂಪದ ಗುಣಗಳಿಗೆ ಹೆಸರುವಾಸಿ. ಯಾರನ್ನೇ ಆಗಲಿ, ಗೌರವದಿಂದ ಮಾತನಾಡಿಸುವ ಗುಣ ಇವರದು. ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿ ರಾಜಕೀಯ ರಂಗಕ್ಕೆ ಬಂದು ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಕುಡಿಯುವ ನೀರು, ವಿದ್ಯುತ್, ರಸ್ತೆ, ಮೇಲು ಸೇತುವೆ, ಕ್ರೀಡಾಂಗಣ, ಗ್ರಂಥ ಭಂಡಾರ ಹೀಗೆ ಇವರು ಕಲ್ಪಿಸಿರುವ ಮೂಲ ಸೌಕರ್ಯ ಮಾದರಿಯಾದುದು

ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರ ಹಲವಾರು ಧರ್ಮ ಗುರುಗಳ ಪ್ರೀತಿ ವಿಶ್ವಾಸಕ್ಕೆ ಸೋಮಣ್ಣ ಅವರು ಪಾತ್ರರಾಗಿದ್ದಾರೆ.





ನಮ್ಮ ಸೋಮಣ್ಣ


ನಡೆದಾಡುವ ದೇವರ ಅಚ್ಚುಮೆಚ್ಚಿನ ಶಿಷ್ಯ

ನಡೆದಾಡುವ ದೇವರೆಂದೇ ಜನಪ್ರಿಯರಾಗಿದ್ದ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪಾಲಿಗೆ ಸೋಮಣ್ಣ ಅವರು ಬಲಗೈಯಂತಿದ್ದರು. ಸ್ವಾಮೀಜಿಯವರು ಸೋಮಣ್ಣ ಅವರ ಮೇಲೆ ಅಪಾರ ವಿಶ್ವಾಸ ಇರಿಸಿದ್ದರು. ಸ್ವಾಮೀಜಿಯವರು ಕೊನೆಯುಸಿರು ಎಳೆಯುವವರೆಗೂ ಅವರ ಜತೆಯಲ್ಲಿದ್ದು ಸೋಮಣ್ಣ ಆರೈಕೆ ಮಾಡಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ತಮ್ಮ ನಡುವಿನ ಆತ್ಮೀಯ ಒಡನಾಟವನ್ನು ಸೋಮಣ್ಣ ಅವರು ಇಲ್ಲಿ ಮೆಲುಕು ಹಾಕಿದ್ದಾರೆ....

1989ರಿಂದಲೇ ತುಮಕೂರಿನ ಸಿದ್ಧಗಂಗಾ ಮಠದ ಜತೆ ನನ್ನ ಒಡನಾಟ ಶುರುವಾಯಿತು. ದಿನ ಕಳೆದಂತೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಜತೆ ನನ್ನ ನಂಟು ಬಲವಾಗುತ್ತ ಹೋಯಿತು.

ಸ್ವಾಮೀಜಿ ಅಕ್ಷರಶಃ ನಡೆದಾಡುವ ದೇವರು. ಅವರು ಎಳೆಯ ಮಗುವಿನಂತಿದ್ದರು. ಕೆಲವೊಮ್ಮೆ ಹಟ ಮಾಡುತ್ತಿದ್ದರು. ಭಾವುಕರಾಗುತ್ತಿದ್ದರು. ಖುಷಿಯಾದಾಗ ಮನಸು ತುಂಬ ನಗುತ್ತಿದ್ದರು. ದಿನಕ್ಕೆ ನಾಲ್ಕೈದು ಗಂಟೆ ಏಕಾಗ್ರತೆಯಿಂದ ಪೂಜೆಯಲ್ಲಿ ತೊಡಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಿದ್ದರು. ದಾಸೋಹದಲ್ಲಿ ತನ್ಮಯರಾಗುತ್ತಿದ್ದರು. ಇದಿಷ್ಟೇ ಅವರ ಪ್ರಪಂಚವಾಗಿತ್ತು...

ಮಠದಲ್ಲಿ ಏನೇ ಸಣ್ಣ, ದೊಡ್ಡ ಉತ್ಸವ-ಸಮಾರಂಭಗಳು ನಡೆಯಬೇಕಿದ್ದರೂ ನನ್ನ ಸಲಹೆ ಪಡೆಯಲು ಮರೆಯುತ್ತಿರಲಿಲ್ಲ. ಆದರೆ ಎಷ್ಟೇ ಬೃಹತ್ ಸಮಾವೇಶ ಇದ್ದಾಗಲೂ, ಊಟೋಪಚಾರದ ಸಾಮಾನು ಸರಂಜಾಮುಗಳ ಕುರಿತ ಅವರ ಲೆಕ್ಕಾಚಾರ ಕರಾರುವಾಕ್ ಆಗಿರುತ್ತಿತ್ತು. ಅಕ್ಕಿಯಿಂದ ಹಿಡಿದು ಉಪ್ಪು-ಉಪ್ಪಿನಕಾಯಿಯವರೆಗೆ ಅವರು ಪಟ್ಟಿಯಲ್ಲಿ ಎಷ್ಟು ಬರೆಯುತ್ತಿದ್ದರೋ ಕರೆಕ್ಟ್ ಆಗಿ ಅಷ್ಟೇ ಖರ್ಚಾಗುತ್ತಿತ್ತು. ಹೆಚ್ಚು ಕಡಿಮೆ ಆಗುತ್ತಿರಲಿಲ್ಲ. ಸ್ವಾಮೀಜಿ, ಇಷ್ಟು ನಿಖರವಾಗಿ ಅದು ಹೇಗೆ ಅಂದಾಜು ಮಾಡ್ತೀರಿ ನೀವು ಎಂದು ನಾನು ಕೇಳಿದರೆ ಸುಮ್ಮನೆ ನಗುತ್ತಿದ್ದರು.

ಬಾಳೆ ಎಲೆ ಬಂದ ಪವಾಡ...

ಒಮ್ಮೆ ದೊಡ್ಡ ಉತ್ಸವವೊಂದರ ಸಂದರ್ಭದಲ್ಲಿ ಎಲ್ಲ ಸಾಮಾನುಗಳೂ ಬಂದವು. ನಾಳೆ ಬೆಳಗ್ಗೆಯೇ ಕಾರ್ಯಕ್ರಮ. ಆದರೆ ರಾತ್ರಿ 10 ಗಂಟೆ ಹೊತ್ತಿಗೆ ಊಟಕ್ಕೆ ಬಾಳೆ ಎಲೆ ತಾರದಿರುವುದು ಗಮನಕ್ಕೆ ಬಂತು. ಎರಡು ಲೋಡ್ ಬಾಳೆ ಎಲೆ ಬೇಕಿತ್ತು. ಸ್ವಾಮೀಜಿ, ಈಗ ಇಷ್ಟು ಹೊತ್ತಲ್ಲಿ ಬಾಳೆ ಎಲೆ ಇಲ್ಲ ಅಂದ್ರೆ ನಾನು ಎಲ್ಲಿಂದ ತರಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ಮೊದಲು ನೀನು ಪ್ರಸಾದ ತಗೋ.‌ ಬಾಳೆ ಎಲೆ ವ್ಯವಸ್ಥೆ ಏನಾದರೂ ಆಗುತ್ತೆ ಬಿಡು ಎಂದರು. ನಾನು ಆತಂಕದಲ್ಲೇ ಇದ್ದೆ. ರಾತ್ರಿ 1 ಗಂಟೆ ಹೊತ್ತಿಗೆ ತಮಿಳು ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ, ಇಲ್ಲಿ ಸೋಮಣ್ಣ ಅಂದರೆ ಯಾರು ಅಂತ ಒದರುತ್ತ ಬಂದ. ಹೊರಗೆ ಹೋಗಿ ನೋಡಿದರೆ, ತಮಿಳುನಾಡಿನಿಂದ ಎರಡು ಲೋಡ್ ಬಾಳೆ ಎಲೆ ಬಂದಿತ್ತು!

ರಾಷ್ಟಪತಿಗಳಾದ ಶಂಕರ್ ದಯಾಳ್ ಶರ್ಮಾ, ಪ್ರತಿಭಾ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಮೊದಲಾದ ವಿವಿಐಪಿಗಳನ್ನು ಶ್ರೀ ಮಠಕ್ಕೆ ಆಹ್ವಾನಿಸಿ, ಅವರನ್ನು ಬರಮಾಡಿಕೊಳ್ಳುವ ಹೊಣೆಗಾರಿಕೆಯನ್ನು ಸ್ವಾಮೀಜಿ ನನಗೇ ವಹಿಸಿದ್ದರು. ಆಹ್ವಾನ ಪತ್ರಿಕೆ ನೀಡಲು ರಾಷ್ಟ್ರಪತಿ ಭವನಕ್ಕೂ ನಾನೇ ಹೋಗಿದ್ದೆ.









ನಮ್ಮ ಸೋಮಣ್ಣ


ಸ್ವಾಮೀಜಿಯವರ ಸರಳತೆ ಮತ್ತು ಸೇವಾ ಚರಿತ್ರೆ ಕಂಡು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮಂತ್ರಮುಗ್ಧರಾಗಿದ್ದರು. ಇನ್ನೇನು ಕಾರ್ಯಕ್ರಮ ಮುಗಿಸಿ ಹೊರಡಬೇಕು ಎನ್ನುವಷ್ಟರಲ್ಲಿ ಪ್ರತಿಭಾ ಪಾಟೀಲ್ ನನ್ನನ್ನು ಕರೆದು, ಸ್ವಾಮೀಜಿಯವರ ಪಾದ ಮುಟ್ಟಿ ನಮಸ್ಕರಿಸುವ ಆಸೆ ವ್ಯಕ್ತಪಡಿಸಿದರು. ನಾನು ಓಡಿ ಹೋಗಿ ಸ್ವಾಮೀಜಿಯವರಿಗೆ ವಿಷಯ ಹೇಳಿದೆ. ಅವರು ಆಯ್ತು ಬರಲಿ ಎಂದರು. ಪ್ರತಿಭಾ ಪಾಟೀಲ್ ಅವರು ಸ್ವಾಮೀಜಿಯವರ ಪಾದದ ಮೇಲಿನ ವಸ್ತ್ರ ಮೇಲಕ್ಕೆ ಸರಿಸಿ ಹಣೆ ಊರಿದರು.‌ ತಮಗೆ ನೆಮ್ಮದಿಯ ಮುಕ್ತಿ ಸಿಗಲೆಂದು ಪ್ರಾರ್ಥಿಸಿ ಸ್ವಾಮೀಜಿ ಎಂದು ಕೋರಿಕೊಂಡರು.

ಸ್ವಾಮೀಜಿ ಬದುಕಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದರು. ಸ್ವಾಮೀಜಿ ಹಾಕಿದ್ದ ಹೂವಿನ ಹಾರವನ್ನು ಮೋದಿ ಬಹುಹೊತ್ತಿನವರೆಗೂ ಕೊರಳಲ್ಲೇ ಇರಿಸಿಕೊಂಡು ಖುಷಿಪಟ್ಟಿದ್ದರು. ನಂತರ ಸ್ವಾಮೀಜಿ ಶಿವೈಕ್ಯರಾದ ಬಳಿಕ ಮೋದಿ, ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದಿದ್ದರು. ಗದ್ದುಗೆಯ ಮುಂದೆ ಏಳೆಂಟು ನಿಮಿಷ ಕೂತು ಪ್ರಾರ್ಥಿಸಿದ್ದರು. ಅಲ್ಲಿದ್ದ ವಿಭೂತಿಯನ್ನು ತಾವೇ ತೆಗೆದುಕೊಂಡು ಹಣೆಗೆ ಹಚ್ಚಿಕೊಂಡಿದ್ದರು. ಈ ಎರಡೂ ಸಂದರ್ಭದಲ್ಲಿ ನಾನು ಸ್ವಾಮೀಜಿ ಮತ್ತು ಮೋದಿಯವರ ಜತೆಗೇ ಇದ್ದೆ.

ಊರಿಗೆ ಹೋದರೂ ಹುಟ್ಟಿದ ಮನೆ ನೋಡಲಿಲ್ಲ...

ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರನ್ನ ಮಠಕ್ಕೆ ಕರೆದುಕೊಂಡು ಹೋಗಲು ನಾನು ಸಾಹಸ ಮಾಡಬೇಕಾಗುತ್ತಿತ್ತು. ಏಯ್ ಸೋಮಣ್ಣ ಹೋಗೋ ಹೋಗೋ. ನಾನು ಲೋಹಿಯಾವಾದಿ. ನಾನ್ಯಾಕೋ ಮಠಕ್ಕೆ ಬರಲಿ ಎಂದು ಗದರಿಸುತ್ತಿದ್ದರು. ಅಂತೂ ಅವರನ್ನು ಒಪ್ಪಿಸಿ ಸಮಾರಂಭವೊಂದಕ್ಕಾಗಿ ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋದೆ. ಕಾರ್ಯಕ್ರಮದ ಮಧ್ಯೆ ಪಟೇಲರನ್ನು ಇದ್ದಕ್ಕಿದ್ದಂತೆ, ಏಯ್ ಸೋಮಣ್ಣ ಈ ಸ್ವಾಮಿ ಎಲ್ಲೋ ಹುಟ್ಟಿದ್ದು ಎಂದರು. ನನಗೋ ಗಾಬರಿ. ವೀರಾಪುರ ಅನ್ನೋ ಊರು ಸರ್ ಎಂದೆ. ಸರಿ, ಸ್ವಾಮೀಜಿ ಅವರ ಊರನ್ನ ಸರಕಾರ ದತ್ತು ತಗೊಳ್ಳತ್ತೆ ಅಂತ ಅನೌನ್ಸ್ ಮಾಡಿಬಿಡು ಅಂದರು. ಸರ್ ನೀವು ಸಿಎಮ್ಮೇ ಅನೌನ್ಸ್ ಮಾಡೋದು ಸೂಕ್ತ ಅಂದೆ, ಅವರು ನಾಳೆ ಜಾರಿಕೊಂಡರೆ ನನಗ್ಯಾಕೆ ಉಸಾಬರಿ ಅಂತ!

ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಪಟೇಲರು ವೀರಾಪುರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದರು. ನಾನೇ ಮುಂದಾಗಿ ನಿಂತು, ಶಾಲೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದೆ. ಶಾಲೆಯ ಉದ್ಘಾಟನೆಯನ್ನು ನೀವೇ ಮಾಡಬೇಕು ಸ್ವಾಮೀಜಿ ಅಂದರೆ, ನಾನ್ ಬರಲ್ಲ. ನೀನೇ ಏನಾರೂ ಮಾಡ್ಕೊ ಹೋಗ್. ಮನೆ ತೊರೆದು ಮಠ ಸೇರಿದವನು ನಾನು. ಮತ್ತೆ ಅಲ್ಲಿಗ್ಯಾಕೆ ಹೋಗಲಿ ಎಂದು ಹಠ ಹಿಡಿದರು. ಕೊನೆಗೂ ಅವರನ್ನು ಒಪ್ಪಿಸಿ ಕರೆದುಕೊಂಡು ಹೋದೆ. ದಾರಿಯುದ್ದಕ್ಕೂ, ಸೋಮಣ್ಣ ನೀನ್ ಸರಿ ಇಲ್ಲ, ಸರಿ ಇಲ್ಲ ಎಂದು ಕೊಸರಾಡುತ್ತಲೇ ಹೋದರು. ಶಾಲೆ ಉದ್ಘಾಟಿಸಿ, ಊರಿನ ಅಭಿವೃದ್ಧಿ ನೋಡಿ ಹಿಂತಿರುಗಿದರು. ಆದರೆ ತಾವು ಹುಟ್ಟಿ ಬೆಳೆದ ಮನೆಯನ್ನು ಅವರು ಅಪ್ಪಿತಪ್ಪಿಯೂ ನೋಡಲಿಲ್ಲ! ವಾಪಸ್ ಬರುವಾಗಲೂ ನನಗೆ ಬೈಯುತ್ತ ಬಂದರು. ಆದರೆ ಮಠದ ಒಳಗೆ ಬರುತ್ತಲೇ, ಅಲ್ಲಿಯ ಜನರ ಬಳಿ ಈ ಸೋಮಣ್ಣ ಎಷ್ಟು ಬುದ್ಧಿವಂತ. ವೀರಾಪುರದಲ್ಲಿ ಎಷ್ಟು ಒಳ್ಳೊಳ್ಳೆಯ ಕೆಲಸ ಮಾಡಿಸಿದ್ದಾನೆ ಎಂದು ಬಾಯಿತುಂಬ ಹೊಗಳಿದರಂತೆ! ಅಂಥ ವಿಶೇಷ ಗುಣ ಅವರದು.

ಬಿಜೆಪಿ ಮುಖಂಡರ ಪ್ರತಿಮೆ ಪ್ರತಿಷ್ಠೆ!

ನನ್ನ ಮಾತಿಗೆ ಸ್ವಾಮೀಜಿ ಎಂದೂ ಇಲ್ಲ ಎನ್ನುತ್ತಿರಲಿಲ್ಲ. ಎಷ್ಟೋ ಬಾರಿ ಘಟಾನುಘಟಿ ಮುಖಂಡರನ್ನೇ ಭೇಟಿ ಮಾಡಲು ಒಪ್ಪದೆ ಬಾಗಿಲು ಹಾಕಿಕೊಂಡು ಕೂತು ಬಿಡುತ್ತಿದ್ದರು. ಕೊನೆಗೆ ಅವರ ಮನವೊಲಿಸಲು ನಾನೇ ಬರಬೇಕಾಗುತ್ತಿತ್ತು.

ರಾಜ್ಯ ಬಿಜೆಪಿ ಇಬ್ಭಾಗವಾದ ಸಂದರ್ಭವದು. ಒಂದು ಬಣದ ಹಿರಿಯ ನಾಯಕರು ಸ್ವಾಮೀಜಿಯನ್ನು ಭೇಟಿಯಾಗಿ, ಮಠದ ದ್ವಾರದ ಬಳಿ ಸ್ವಾಮೀಜಿಯ ಆಳೆತ್ತರದ ಪ್ರತಿಮೆ ಸ್ಥಾಪಿಸಲು ಒಪ್ಪಿಗೆ ಪಡೆದು ಬಿಟ್ಟಿದ್ದರು. ಈ ವಿಷಯ ಕೇಳಿ







ನಮ್ಮ ಸೋಮಣ್ಣ



ಇನ್ನೊಂದು ಬಣದ ಹಿರಿಯ ಮುಖಂಡರೊಬ್ಬರಿಗೆ ಪ್ರತಿಷ್ಠೆಯ ಪ್ರಶ್ನೆ ಎದುರಾಯಿತು. ಸ್ವಾಮೀಜಿಯನ್ನು ಭೇಟಿಯಾಗಿ, ಇದಕ್ಕೆ ಒಪ್ಪಬೇಡಿ. ಇದು ನನ್ನ ಮರ್ಯಾದೆಯ ಪ್ರಶ್ನೆ ಎಂದು ಗೋಗರೆದರು. ಆದರೆ ಸ್ವಾಮೀಜಿ ಒಪ್ಪಲೇ ಇಲ್ಲ. ಕೊನೆಗೆ ಆ ಮುಖಂಡರು ನನ್ನನ್ನು ಕರೆದು, ಹೇಗಾದರು ಮಾಡಿ ಈ ಪ್ರತಿಮೆ ಸ್ಥಾಪನೆ ನಿಲ್ಲಿಸು ಎಂದರು. ನಾನು ಸ್ವಾಮೀಜಿ ಬಳಿ ದೌಡಾಯಿಸಿ, ಸೀದಾ ಡೈ ಹೊಡೆದು ಕಾಲು ಹಿಡಿದುಕೊಂಡೆ. ನೀನು ಯಾಕೆ ಬಂದಿದ್ದೀಯಾ ಅಂತ ಗೊತ್ತಾಯ್ತು. ಆದರೆ ನಾನು ಪ್ರತಿಮೆ ಸ್ಥಾಪಿಸಬಹುದು ಅಂತ ಒಪ್ಪಿಗೆ ಕೊಟ್ಟಿದ್ದೇನೆ. ಈಗ ಬೇಡ ಅನ್ನೋ ಪ್ರಶ್ನೆಯೇ ಇಲ್ಲ. ನೀನು ಪ್ರಸಾದ ತಗೋ ಹೋಗು ಎಂದರು.

ಬುದ್ಧಿ, ಪ್ರಸಾದ ಗಿಸಾದ ಬೇಡ. ನೀವು ನನ್ನ ಮಾತಿಗೆ ಒಪ್ಪುವವರೆಗೂ ನಿಮ್ಮ ಕಾಲು ಬಿಡುವುದಿಲ್ಲ ಎಂದೆ. ಸೋಮಣ್ಣ ನೀನ್ ಸರಿ ಇಲ್ಲ, ನೀನ್ ಸರಿ ಇಲ್ಲ ಎಂದು ಬೈಯುತ್ತಲೇ, ಆಯ್ತು ಏಳು‌. ಪ್ರತಿಮೆ ಬೇಡ ಅಂತ ಅವರಿಗೆ ಹೇಳ್ತೇನೆ ಎಂದರು. ಅವರಿಗೆ ಏನಂತ ಹೇಳಲಿ ಎಂದರು. ನಾನು ಬದುಕಿರುವಾಗ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ ಅಂತ ಹೇಳಿ ಬುದ್ಧಿ ಅಂತ ಉಪಾಯ ಹೇಳಿಕೊಟ್ಟೆ! ಕೊನೆಗೆ ಸ್ವಾಮೀಜಿ ಬಿಜೆಪಿಯ ಒಂದು ಬಣದವರನ್ನು ಕರೆದು ಹೀಗೆಯೇ ಹೇಳಿ, ಪ್ರತಿಮೆ ಸ್ಥಾಪನೆ ನಿಲ್ಲಿಸಿದರು!

ಒಮ್ಮೆ ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದ ಆರ್ ಎಸ್ ಎಸ್ ನ ಪ್ರಮುಖ ಸಮಾವೇಶವೊಂದಕ್ಕೆ ಸಂಘಟನೆಯ ಹಿರಿಯ ಮುಖಂಡರೆಲ್ಲ ಸ್ವಾಮೀಜಿಯನ್ನು ಕರೆಯಲು ಬಯಸಿದ್ದರು. ಆದರೆ ಸ್ವಾಮೀಜಿ ಅದ್ಯಾಕೋ ಹಿಂದೆ ಸರಿದಿದ್ದರು. ಕೊನೆಗೆ ನಾನೇ ಮಠಕ್ಕೆ ಧಾವಿಸಿ, ಹೋಗಿ ಬನ್ನಿ ಬುದ್ಧಿ, ಏನೂ ಆಗಲ್ಲ ಎಂದೆ. ಸ್ವಾಮೀಜಿ ಒಪ್ಪಿ, ಸುಮಾರು ಮೂರು ತಾಸು ಆ ಕಾರ್ಯಕ್ರಮದಲ್ಲಿದ್ದು ಬಂದಿದ್ದರು.

ನಮ್ ಸೋಮಣ್ಣ ನಮ್ ಸೋಮಣ್ಣ ಎನ್ನುತ್ತಿದ್ದರು...

ಹೀಗೆ, ನಾನು ಏನೇ ಹೇಳಿದರೂ ಸ್ವಾಮೀಜಿ ಇಲ್ಲ ಎನ್ನುತ್ತಿರಲಿಲ್ಲ. ನನ್ನ ಮೇಲೆ ಅಷ್ಟು ನಂಬಿಕೆ ಇತ್ತು. ಈ ಸೋಮಣ್ಣ ನಂಗೇ ಬಗ್ಗಿಸ್ತಾನಲ್ಲ? ಬಲು ಬುದ್ಧಿವಂತ ಎಂದು ಹುಸಿಕೋಪದಿಂದ ಹೇಳುತ್ತಿದ್ದರು. ಬುದ್ಧಿ, ನೀವೇ ನನಗೆ ಆಶೀರ್ವಾದ ಮಾಡಿ, ನೀವೇ ನಂಗೆ ಫುಲ್ ಪವರ್ ಕೊಟ್ಟು, ಈಗ ಬಗ್ಗಿಸ್ತಾನೆ ಅಂದ್ರೆ ಹೇಗೆ? ಎಂದು ನಾನೂ ತಮಾಷೆಯಾಗಿ ಹೇಳಿದಾಗ ಸ್ವಾಮೀಜಿ ಜೋರಾಗಿ ನಗುತ್ತಿದ್ದರು.

ಕಠಿಣ ತಪೋನಿಷ್ಠ, ಧರ್ಮನಿಷ್ಠ, ಸೇವಾನಿಷ್ಠ ಅವರು. ಎಲ್ಲರ ಬಳಿ ನಮ್ ಸೋಮಣ್ಣ, ನಮ್ ಸೋಮಣ್ಣ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಅವರ ಜೀವಿತದ ಕೊನೆಯ ದಿನಗಳಲ್ಲೂ ಅವರ ಸೇವೆ ಮಾಡುವ ಪುಣ್ಯ ನನಗೆ ಸಿಕ್ಕಿದೆ. ಸ್ವಾಮೀಜಿ ಕೊನೆಯ ಉಸಿರು ಎಳೆಯುವಾಗಲೂ ನಾನು ಅವರ ಜತೆಯೇ ಇದ್ದೆ. ಅವರ ಸೇವೆ ನನ್ನ ಬದುಕಿನ ಬಹು ದೊಡ್ಡ ಭಾಗ್ಯ.

ಸೋಮಣ್ಣ ಅವರ ಬಗ್ಗೆ ಶ್ರೀ ಶಿವಕುಮಾರ ಸ್ವಾಮೀಜಿ ಹೀಗೆ ಶ್ಲಾಘಿಸಿದ್ದರು: ಶರಣ ಸೋಮಣ್ಣ ಅವರ ಸೇವಾ ಜೀವನವನ್ನು ಅವಲೋಕಿಸುವಾಗ, ತನುವ ಕೊಟ್ಟು ಗುರುವನೊಲಿಸಬೇಕು. ಮನವ ಕೊಟ್ಟು ಲಿಂಗವನೊಲಿಸಬೇಕು. ಧನವ ಕೊಟ್ಟು ಜಂಗಮವನೊಲಿಸಬೇಕು ಎಂಬ ಭಕ್ತಿ ಭಂಡಾರಿ ಬಸವಣ್ಣ ಅವರ ವಚನ ನೆನಪಾಗುತ್ತದೆ. ಬಡತನವನ್ನು ಹಾಸಿ ಹೊದ್ದು ಮೇಲೆದ್ದು ಬಂದವರು ಸೋಮಣ್ಣ. ಸಿರಿ ಬಂದಾಗ ಕರೆದು ದಾನವ ಮಾಡು ಎಂಬ ಸತ್ಪಥದಲ್ಲಿ ಮುನ್ನಡೆದಿರುವವರು. ದೀನ ದಲಿತ, ಅಸಹಾಯಕರ ಬಂಧುವಾಗಿ ಜಾತಿ ಜಾಢ್ಯ ಮೀರಿ ಬೆಳೆದು ನಿಂತಿದ್ದಾರೆ. ಸೇವೆಯನ್ನೇ ಜೀವನದ ಪರಮ ಗುರಿಯನ್ನಾಗಿಸಿಕೊಂಡಿರುವ ಇವರು, ಶ್ರೀ ಮಠದ ಕೈಂಕರ್ಯವನ್ನು ತ್ರಿಕರಣಶುದ್ಧಿಯಿಂದ ಮಾಡುತ್ತಿದ್ದಾರೆ. ಶ್ರೀ ಮಠದ ಶತಮಾನೋತ್ಸವವನ್ನು ಹಗಲು ರಾತ್ರಿ ಶ್ರಮಿಸಿ ಯಶಸ್ವಿಗೊಳಿಸಿದ್ದನ್ನು ಯಾರೂ ಮರೆಯಲಾಗದು. ಸೇವಾಪಥ ಎನ್ನುವುದು ಹೂವಿನ ಹಾದಿಯಲ್ಲ. ಮುಳ್ಳುಗಳು ಇದ್ದೇ ಇರುತ್ತವೆ. ಆದರೆ ಸೋಮಣ್ಣ ಅವರು ಅದನ್ನು ತಾಳ್ಮೆ ಮತ್ತು ಜಾಣ್ಮೆಯಿಂದ ಅದನ್ನು ನಿವಾರಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ...







ನಮ್ಮ ಸೋಮಣ್ಣ


ಎಲ್ಲ ಸಮುದಾಯಗಳ ಸ್ವಾಮೀಜಿಗಳ ಜತೆ ಒಡನಾಟ...

ಶ್ರೀ ಸೋಮಣ್ಣ ಅವರು ವೀರಶೈವರಾಗಿದ್ದರೂ ಒಕ್ಕಲಿಗ, ಕುರುಬ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಸೇರಿದಂತೆ ಎಲ್ಲ ಸಮುದಾಯಗಳ ಸ್ವಾಮೀಜಿಗಳ ಕೃಪೆಗೆ ಪಾತ್ರರಾಗಿದ್ದಾರೆ. ಇದು ಶ್ರೀ ಸೋಮಣ್ಣ ಅವರ ವಿಶಾಲ ಹೃದಯ ಮತ್ತು ವಿನಮ್ರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತಿತರ ಹಲವಾರು ಧರ್ಮ ಗುರುಗಳ ಪ್ರೀತಿ ವಿಶ್ವಾಸಕ್ಕೆ ಸೋಮಣ್ಣ ಅವರು ಪಾತ್ರರಾಗಿದ್ದಾರೆ.