ಮೊದಲ ಬಾರಿ ಶಾಸಕರಾಗಿದ್ದಾಗಲೇ ಸೋಮಣ್ಣ ಅವರಿಗೆ ಸಚಿವ ಪದವಿಯ ಹೊಣೆಗಾರಿಗೆ ಸಿಕ್ಕಿದ್ದು ವಿಶೇಷ. 1997ರಿಂದ 99ರವರೆಗೆ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಬೆಂಗಳೂರು ಮೆಟ್ರೊ ರೈಲಿನ ಕಲ್ಪನೆ ಗರಿಗೆದರಿದ್ದು ಆ ಅವಧಿಯಲ್ಲೇ. ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಸಮ್ಮುಖದಲ್ಲಿ ಆಗ ನಡೆದಿದ್ದ ಮೆಟ್ರೊ ರೈಲು ಯೋಜನೆ ಕುರಿತ ಚಿಂತನ ಮಂಥನಕ್ಕೆ ನಗರಾಭಿವೃದ್ಧಿ ಸಚಿವರಾಗಿದ್ದ ಸೋಮಣ್ಣ ಅವರು ಸಾಕ್ಷಿಯಾಗಿದ್ದರು. ಇದು ಕೇವಲ 'ಕನಸು' ಅಷ್ಟೇ ಎನ್ನಲಾಗುತ್ತಿದ್ದ ಮೆಟ್ರೊ ರೈಲು ಇಂದು ನನಸಾಗಿ ಬೆಂಗಳೂರಿಗರ ಜೀವನಾಡಿಯಾಗಿದೆ!
ರಾಜಧಾನಿ ಬೆಂಗಳೂರಿಗೆ 90ರ ದಶಕದಲ್ಲೇ ಕಾವೇರಿ ನೀರು ಹರಿಸುವ ಮಹತ್ವದ ಯೋಜನೆ ರೂಪಿಸದೇ ಇದ್ದಿದ್ದರೆ ಈ ವೇಳೆಗಾಗಲೇ ಮಹಾನಗರದಲ್ಲಿ ನೀರಿಗೆ ದೊಡ್ಡ ಮಟ್ಟದಲ್ಲಿ ಹಾಹಾಕಾರ ಸೃಷ್ಟಿಯಾಗುತ್ತಿತ್ತು. 1996ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರಾಗಿದ್ದ ವಿ. ಸೋಮಣ್ಣ ಅವರ ದೂರದೃಷ್ಟಿಯಿಂದ ಬೆಂಗಳೂರು ಮಹಾನಗರದ ಎಲ್ಲ ಭಾಗಕ್ಕೂ ಕಾವೇರಿ ನೀರು ಸಿಗುವ ವ್ಯವಸ್ಥೆಯಾಯಿತು.
ಕಾವೇರಿ ನಾಲ್ಕನೇ ಹಂತದ ಯೋಜನೆ ಆಗಲೇ ಕಾರ್ಯರೂಪಕ್ಕೆ ಬಂದದ್ದು. 90ರ ದಶಕದಲ್ಲಿ ಬೆಂಗಳೂರಿನ ಜನಸಂಖ್ಯೆ 50 ಲಕ್ಷದ ಸಮೀಪ ಇತ್ತು.
ಮುಂದಿನ ಎರಡೂವರೆ ದಶಕಗಳಲ್ಲಿ ಬೆಂಗಳೂರು ಮಹಾನಗರದ ಜನಸಂಖ್ಯೆ ಮೂರು ಪಟ್ಟು ಬೆಳೆಯುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ಐಟಿ-ಬಿಟಿಯಲ್ಲಿ ದಾಪುಗಾಲು ಹಾಕುತ್ತಿದ್ದ ಬೆಂಗಳೂರು ಇಷ್ಟೊಂದು ವೇಗದಲ್ಲಿ ಬೆಳೆಯುತ್ತದೆ, ದೇಶ-ವಿದೇಶಿ ಕಂಪನಿಗಳು ಇಲ್ಲಿ ಬಂದು ನೆಲೆಯೂರುತ್ತವೆ,ಅನ್ಯ ರಾಜ್ಯಗಳ ಲಕ್ಷೋಪಲಕ್ಷ ಜನ ಇಲ್ಲಿ ಬಂದು ನೆಲೆಸುತ್ತಾರೆ ಎಂಬ ಊಹೆ ಕೂಡ ಬಹುತೇಕರಿಗೆ ಇರಲಿಲ್ಲ. ಆದರೆ ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ವಿ. ಸೋಮಣ್ಣ ಇದನ್ನು ಮನಗಂಡಿದ್ದರು. ಇಷ್ಟೊಂದು ಪ್ರಮಾಣದ ನೀರನ್ನು ಪುನಃ ಕಾವೇರಿಯಿಂದ ತರುವುದು ಕಷ್ಟ. ತಮಿಳುನಾಡು ಕ್ಯಾತೆ ತೆಗೆಯುತ್ತದೆ ಎಂಬ ಆತಂಕ ಇತ್ತು. ಎಲ್ಲ ಅಡೆತಡೆಗಳನ್ನು ನಿವಾರಿಸಿ ವಾಸ್ತವ ಸಂಗತಿಗಳನ್ನು ಅಂದಿನ ಮುಖ್ಯಮಂತ್ರಿ ಪಟೇಲರಿಗೆ ಮನವರಿಕೆ ಮಾಡಿಕೊಟ್ಟ ಸೋಮಣ್ಣ ಅವರು ಕಾವೇರಿಯಿಂದ 500 ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿಯೇ ಬಿಟ್ಟರು. ಇದಕ್ಕೆ ಪೂರಕವಾಗಿ ಅಂದಿನ ಕೆಲ ಅಧಿಕಾರಿಗಳು ಯೋಜನೆಯ ನೀಲನಕ್ಷೆ ರೂಪಿಸಿದರು.
ಅಂದು ಪ್ರಧಾನಿ ಹುದ್ದೆ ಅಲಂಕರಿಸಿದ್ದ ಎಚ್.ಡಿ.ದೇವೇಗೌಡ ಅವರಿಗೂ ಸೋಮಣ್ಣ ಕಾವೇರಿ ಕುಡಿಯುವ ಯೋಜನೆ ಕುರಿತು ವಿವರಿಸಿದ್ದರು. ಸೋಮಣ್ಣ ಅವರ ದೂರದೃಷ್ಟಿ ಮೆಚ್ಚಿಕೊಂಡ ದೇವೇಗೌಡರು ಯೋಜನೆ ಕಾರ್ಯಗತವಾಗಲು ಎಲ್ಲ ಬೆಂಬಲವನ್ನೂ ನೀಡಿದರು.
ಈಗಾಗಲೇ ಕಾವೇರಿಯಿಂದ ಕೆಲವು ನೂರು ಟಿಎಂಸಿ ನೀರು ಹರಿಸಲಾಗುತ್ತಿದೆ. ಮತ್ತೆ ಅಲ್ಲಿಂದ ಕಾವೇರಿ ನೀರು ತರುವುದು ಹೇಗೆ? ಮಾರ್ಗ ಮಧ್ಯೆ ಇರುವ ಹಳ್ಳಿಗಳಿಗೆ ಕುಡಿಯುವ ನೀರು ಇಲ್ಲ. ಗ್ರಾಮೀಣ ಭಾಗದ ಜನರು ತಗಾದೆ ತೆಗೆಯಬಹುದು ಎಂದು ಕೆಲವರು ಎಚ್ಚರಿಸಿದರು. ಕನಕಪುರ ಮೂಲದವರಾದ ಸೋಮಣ್ಣ ಅವರಿಗೆ ಮಠಾಧೀಶರಿಂದ ಹಿಡಿದು ಎಲ್ಲ ಪಕ್ಷಗಳ ಧುರೀಣರ ಒಡನಾಟ ಇದ್ದಿದ್ದರಿಂದ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ ನೀರು ತರುವ ಅಗತ್ಯ ಏನಿದೆ ಎಂಬ ಸಂಗತಿಯನ್ನು ಬಿಡಿಸಿಟ್ಟರು. ಯಾವುದೇ ನದಿ ಮೂಲ ಇಲ್ಲದ ಬೆಂಗಳೂರಿಗೆ ಮುಂದಾಲೋಚನೆಯಾಗಿ ಕಾವೇರಿ ಕುಡಿಯುವ ನೀರು ಯೋಜನೆ ರೂಪಿಸದಿದ್ದರೆ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂಬ ಅಂಶವನ್ನು ಸೋಮಣ್ಣ ಮನಗಂಡಿದ್ದರು. ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಛಲ ಬಿಡದೆ ಯೋಜನೆಗೆ ಚಾಲನೆ ನೀಡಿದರು. ಅದರ ಪರಿಣಾಮ ನೂರು ಕಿ.ಮೀ.ಗೂ ದೂರದ ತೊರೆಕಾಡನಹಳ್ಳಿ ಜಲಾಶಯದಿಂದ ಕಾವೇರಿ ನೀರು ಹರಿಸುವ ಯೋಜನೆ ಕಾರ್ಯಗತವಾಯಿತು.
ಅತಿ ದೂರದಿಂದ ಪೈಪ್ ಲೈನ್ ಮೂಲಕ ಕಾವೇರಿ ನೀರು ಹರಿಸಿದರೆ ಸಾಲದು. ಇದರಿಂದ ನಗರದಲ್ಲಿ ಎಲ್ಲ ಪ್ರದೇಶಗಳಿಗೂ ನೀರು ಪೂರೈಕೆ ಕಷ್ಟ. ಎಲ್ಲ ಮನೆಗಳಿಗೂ ಸಮರ್ಪಕ ನೀರು ಸಿಗಬೇಕಾದರೆ ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸಿದರೆ ಸಾಲದು, ನೆಲಮಟ್ಟದಲ್ಲೇ ಬೃಹತ್ ಜಲಾಗಾರಗಳನ್ನು ನಿರ್ಮಿಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ನಗರದಾದ್ಯಂತ ಎತ್ತರದ ಪ್ರದೇಶಗಳನ್ನು ಆಯ್ದುಕೊಂಡು ಎಂಟು ಜಲಾಗಾರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಇದೇ ಜಲಾಗಾರ ಗಳಿಂದ ನಗರದಾದ್ಯಂತ ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ. ಅಂದು ಈ ಯೋಜನೆಗೆ ಚಾಲನೆ ನೀಡದೆ ಇದ್ದಿದ್ದರೆ ಇಂದು ಬೆಂಗಳೂರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಷ್ಟೊಂದು ಸಲೀಸಾಗಿ ಆಗುತ್ತಿರಲಿಲ್ಲ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರು ಮಹಾನಗರದಲ್ಲಿ ನೀರು ಪೂರೈಕೆ ದೊಡ್ಡ ಸವಾಲಾಗಿತ್ತು. ನಕಲಿ ಸಂಪರ್ಕಗಳ ಜತೆಗೆ ನೀರು ಸೋರಿಕೆ ಪ್ರಮಾಣ ಹೆಚ್ಚಿದ್ದರಿಂದ ಬೆಂಗಳೂರು ಜಲಮಂಡಳಿಗೆ ಪ್ರತಿ ವರ್ಷ ಕೋಟ್ಯಂತರ ರೂ. ನಷ್ಟವಾಗುತ್ತಿತ್ತು. ಸಾವಿರಾರು ಮಂದಿ ನೀರಿನ ಸಂಪರ್ಕ ಪಡೆದುಕೊಂಡಿದ್ದರೂ ಬಿಲ್ ಪಾವತಿಸುತ್ತಿರಲಿಲ್ಲ. ಇದೇ ನೆಪ ಮುಂದಿಟ್ಟುಕೊಂಡು 1999ರ ನಂತರ ಬಂದ ಸರಕಾರ ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿತ್ತು. ಇದನ್ನು ಬಲವಾಗಿ ವಿರೋಧಿಸಿದ ಸೋಮಣ್ಣನವರು, ವಿಧಾನಸಭೆಯಲ್ಲೇ ಈ ವಾಸ್ತವ ಸಂಗತಿಯನ್ನು ಅಂದಿನ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಒಬ್ಬರೇ ಏಕಾಂಗಿಯಾಗಿ ಹೋರಾಟ ನಡೆಸಿದರು. ಖಾಸಗೀಕರಣದಿಂದ ಮುಂದಿನ ದಿನಗಳಲ್ಲಿ ಆಗುವ ಸಮಸ್ಯೆಗಳ ಕುರಿತು ವಿಧಾನಸಭೆಗೆ ಮನದಟ್ಟು ಮಾಡಿದರು. ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರು ಕೊನೆಗೆ ಖಾಸಗೀಕರಣಗೊಳಿಸುವ ಪ್ರಸ್ತಾವನೆ ಕೈಬಿಟ್ಟರು. ನೀರು ಸರಬರಾಜು ಖಾಸಗೀಕರಣವಾಗಿದ್ದರೆ ಇಂದು ಯಾರೂ ನೆಮ್ಮದಿಯಿಂದ ನೀರು ಕುಡಿಯುವ ಹಾಗಿರಲಿಲ್ಲ. ನೀರಿನ ಬೆಲೆ ಗಗನಕ್ಕೇರುತ್ತಿತ್ತು.
ಬೆಂಗಳೂರಿನಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡವರಲ್ಲಿ ಅಕ್ರಮ ಸಂಪರ್ಕಗಳೇ ಹೆಚ್ಚಿತ್ತು. ಇದು ಜಲಮಂಡಳಿಗೆ ದೊಡ್ಡ ತಲೆನೋವಾಗಿತ್ತು. ಸುಮಾರು 65 ಸಾವಿರ ಅಕ್ರಮ ಸಂಪರ್ಕಗಳು ನಗರದಲ್ಲಿ ಇದ್ದವು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಸೋಮಣ್ಣ ಅವರು ಅಕ್ರಮ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಿದರು. ಇದರಿಂದ ಕೋಟ್ಯಂತರ ರೂ. ಆದಾಯವು ಜಲಮಂಡಳಿಗೆ ಬಂದಿತು. ಇದರ ಜತೆಗೆ ಪ್ರೋರೇಟಾ ಶುಲ್ಕ ವಿಧಿಸಿ ಜಲಮಂಡಳಿಗೆ ಹೆಚ್ಚಿನ ಆದಾಯ ಬರುವಂತೆಯೂ ಮಾಡಿದರು. ಈಗಲೂ ಜಲಮಂಡಳಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುವಲ್ಲಿ 90ರ ದಶಕದಲ್ಲಿ ತೆಗೆದುಕೊಂಡ ತೀರ್ಮಾನಗಳು ಕಾರಣವಾಗಿದೆ.
90ರ ದಶಕದಲ್ಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿತ್ತು. ಇರುವ ರಸ್ತೆಗಳು ಕಿರಿದಾಗಿದ್ದ ಕಾರಣ ವಾಹನಗಳ ಸರಾಗ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. 1994ರಲ್ಲಿ ಜನತಾದಳ ನೇತೃತ್ವದ ಸರಕಾರ ಮುನ್ನಡೆಸುತ್ತಿದ್ದ ಎಚ್.ಡಿ.ದೇವೇಗೌಡರ ಸರಕಾರ ಬೆಂಗಳೂರಿನಲ್ಲಿ ಮೇಲು ರಸ್ತೆ ನಿರ್ಮಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಚಿಂತನೆ ನಡೆಸಿತ್ತು. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ದೇವೇಗೌಡರು 1996ರಲ್ಲಿ ಪ್ರಧಾನಿಯಾಗಿ ದಿಲ್ಲಿ ಕಡೆ ಹೊರಟರು. ನಂತರ ಜೆ.ಎಚ್.ಪಟೇಲರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದ ವಿ.ಸೋಮಣ್ಣ ಅವರಿಗೆ ನಂತರ ಪಟೇಲ್ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಲಾಯಿತು. ಸಿಕ್ಕ
ಎರಡೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಬೆಂಗಳೂರು ಮಹಾನಗರಕ್ಕೆ ಸಾಕಷ್ಟು ಕೊಡುಗೆ ನೀಡಿದರು. ಚಿಂತನೆ ಹಂತದಲ್ಲಿ ಇದ್ದ ಮೇಲು ರಸ್ತೆಗೆ ಚಾಲನೆ ನೀಡಿದರು. ಆಗಲೇ ರೂಪಿತವಾಗಿದ್ದು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಿಂದ 2.2 ಕಿ.ಮೀ. ಉದ್ದದ ಮೇಲು ರಸ್ತೆ. ಸಿಟಿ ಮಾರುಕಟ್ಟೆ ಮೂಲಕವೇ ಮೈಸೂರು ರಸ್ತೆ ಕಡೆಗೆ ವಾಹನಗಳು ಸಂಚರಿಸಬೇಕಾಗಿತ್ತು. ಸಿಟಿ ಮಾರುಕಟ್ಟೆ ಬಳಿ ಜನದಟ್ಟಣೆ ಹೆಚ್ಚಿದ್ದರಿಂದ ಪ್ರತಿ ದಿನ ಜಾಮ್ ಆಗುತ್ತಿತ್ತು. ಇದೇ ಕಾರಣಕ್ಕೆ ಮೇಲು ರಸ್ತೆ ನಿರ್ಮಿಸುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು. ಬೆಂಗಳೂರಿಗೆ ಹೊಸದಾದ ಈ ಯೋಜನೆ ಕುರಿತು ನಾನಾ ಟೀಕೆಗಳು ಬಂದವು. ಇದಾವುದಕ್ಕೂ ಜಗ್ಗದೆ ಯೋಜನೆಯನ್ನು ಮುನ್ನಡೆಸಿದವರು ಸೋಮಣ್ಣ. ಎಲ್ ಆ್ಯಂಡ್ ಟಿ ಕಂಪನಿ ಕೈಗೊಂಡ ಈ ಮೇಲು ರಸ್ತೆ ಈಗಲೂ ಬೆಂಗಳೂರಿನ ದಿ ಬೆಸ್ಟ್ ಮೇಲು ರಸ್ತೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ಬೆಂಗಳೂರು ಮಹಾ ನಗರದಲ್ಲಿ ಕಂದಾಯ ನಿವೇಶನಗಳ ಅಕ್ರಮ ಹಾದಿಗೆ ಸೋಮಣ್ಣ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ತಡೆ ಹಾಕಲಾಯಿತು. ಸಾಂಕೇತಿಕ ಶುಲ್ಕ ವಿಧಿಸುವ ಮೂಲಕ ಕಂದಾಯ ನಿವೇಶನಗಳನ್ನು ಸಕ್ರಮಗೊಳಿಸುವ ಮೂಲಕ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಲಾಯಿತು. ನಗರದ ಕ್ರಮಬದ್ಧ ಬೆಳವಣಿಗೆಗೆ ಈ ಕ್ರಮ ಸಹಕಾರಿ ಆಯಿತು.
ಮೈಸೂರು ಉಸ್ತುವಾರಿ ಸಚಿವರಾಗಿ ವಿ ಸೋಮಣ್ಣ ಅವರು ದಾಖಲಿಸಿರುವ ಸಾಧನೆ ಸದಾ ಸ್ಮರಣಾರ್ಹ.
ನಾಟಕೀಯ ಬೆಳವಣಿಗೆಯಲ್ಲಿ 2019ರಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಸೋಮಣ್ಣ ಅವರನ್ನು ಮೈಸೂರು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ನಾಡಿನ ಹೆಮ್ಮೆಯಾದ ಸಾಂಸ್ಕೃತಿಕ ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿತ್ತು. ಸೋಮಣ್ಣ ಅವರು ತ್ವರಿತವಾಗಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪರಿಣತರ ಸಭೆ ನಡೆಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಡಹಬ್ಬ ದಸರಾವನ್ನು ನಾಡಿಗೆ ನಾಡೇ ಮೆಚ್ಚುವಂತೆ ಅತ್ಯಂತ ಅದ್ಧೂರಿಯಾಗಿ ನಡೆಯುವಂತೆ ಮಾಡಿದರು.
ನವರಾತ್ರಿ, ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ಜರುಗಿದವು. ಆಗ ರೇಷ್ಮೆ ಖಾತೆ ಸಚಿವರೂ ಆಗಿದ್ದ ಸೋಮಣ್ಣ ಅವರು, ವಿಜಯ ದಶಮಿಯಂದು ತಾಯಿ ಚಾಮುಂಡೇಶ್ವರಿಗೆ ಅಪ್ಪಟ ರೇಷ್ಮೆ ಸೀರೆಯಿಂದ ಅಲಂಕರಿಸಿ ಮೆರವಣಿಗೆ ಮಾಡುವ ಮಹತ್ವದ ನಿರ್ಣಯ ಕೈಗೊಂಡರು. ಈ ಮೂಲಕ ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಿದರು.
ದಸರಾ ಮಹೋತ್ಸವ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ ರಸ್ತೆ ವಿಸ್ತರಣೆ ಮಾಡಲಾಯಿತು. ಬಸ್ ನಿಲ್ದಾಣದ ಪಕ್ಕದ ಅಂಗಡಿಗಳನ್ನು ತೆರವು ಮಾಡಿ, ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕಟ್ಟಡ ಸಂಕೀರ್ಣ ನಿರ್ಮಿಸಿಕೊಡಲಾಯಿತು.
ಮೈಸೂರಿನ ಜೆ ಪಿ ನಗರದ ಸುಯೆಜ್ ಫಾರ್ಮ್ ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸುವ ದಶಕಗಳ ಹಿಂದಿನ ಸಮಸ್ಯೆ ಬಗೆಹರಿಸಲು ಸೋಮಣ್ಣ ಅವರು ವಿಶೇಷ ಗಮನ ಹರಿಸಿದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದರು. ನಾಗಪುರ ಮಾದರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ರೂಪಿಸಲು ಯೋಜನೆ ರೂಪಿಸಲಾಯಿತು.