ಶ್ರೀ ವಿ ಸೋಮಣ್ಣ ಅವರು ಕರ್ನಾಟಕದ ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿರುವವರು. ಸೋಮಣ್ಣ ಅವರು ಅತ್ಯಂತ ಪ್ರಬಲ ಜನನಾಯಕ ಮತ್ತು ಸಂಘಟನಾ ಚತುರ ಎಂದು ಪಕ್ಷಾತೀತವಾಗಿ ಎಲ್ಲ ಹಿರಿಯ ಮುಖಂಡರೂ, ಅನುಭವಿ ರಾಜಕೀಯ ವಿಶ್ಲೇಷಣಾಕಾರರು ಒಪ್ಪಿಕೊಳ್ಳುತ್ತಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ರಾಜಕೀಯ ವಲಯದಲ್ಲಿ ಇವರಿಗೆ ಅಪಾರ ಹಿಡಿತವಿದೆ. ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿಯ ಬಗ್ಗೆ ಸೋಮಣ್ಣ ಅವರಿಗೆ ಅಪಾರ ಅನುಭವ ಮತ್ತು ಅಮೂಲ್ಯ ದೂರದೃಷ್ಟಿ ಇದೆ. ರಾಜ್ಯದ ಅತಿ ದೊಡ್ಡ ಸಮುದಾಯ ಎನಿಸಿರುವ ವೀರಶೈವ ಸಮಾಜದಲ್ಲೂ ಸೋಮಣ್ಣ ಅವರು ಅತ್ಯಂತ ಪ್ರಭಾವಿ ಮತ್ತು ಹಿರಿಯ ಮುಖಂಡರಾಗಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ, ವಸತಿ, ಮೂಲ ಸೌಕರ್ಯ, ಆಹಾರ ಮತ್ತು ನಾಗರಿಕ ಸರಬರಾಜು, ಬಂದೀಖಾನೆ, ಗೃಹ ರಕ್ಷಕ ದಳ, ಸೈನಿಕ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ಮುಜರಾಯಿ ಹೀಗೆ ಹಲವಾರು ಮಹತ್ವದ ಖಾತೆಗಳನ್ನು ತಮ್ಮ ಮೂರೂವರೆ ದಶಕಗಳ ರಾಜಕೀಯ ಜೀವನದಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ದಕ್ಷತೆಯಿಂದ ಸೋಮಣ್ಣ ಅವರು ನಿಭಾಯಿಸಿದ್ದಾರೆ.
ಈಗಿನ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ವಸತಿ ಮತ್ತು ಮೂಲಸೌಕರ್ಯ ಖಾತೆ ಸಚಿವರಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಆಶಯಕ್ಕೆ ಪೂರಕವಾಗಿ ಹಲವಾರು ಕ್ರಾಂತಿಕಾರಕ ಸುಧಾರಣೆಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಸಂಸದರು
ತುಮಕೂರು ಲೋಕಸಭಾ ಕ್ಷೇತ್ರ
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರು.
ಭಾರತ ಸರಕಾರ
ಜನುಮ ದಿನ:: 20 ಜುಲೈ 1951
ತಂದೆ:ಶ್ರೀ ವೀರಣ್ಣ
ತಾಯಿ:ಶ್ರೀಮತಿ ಕೆಂಪಮ್ಮ
ಪತ್ನಿ:ಶ್ರೀಮತಿ ಶೈಲಜಾ
ಮಕ್ಕಳು:ಡಾ. ನವೀನ್ ಸೋಮಣ್ಣ, ಡಾ. ಅರುಣ್ ಸೋಮಣ್ಣ,ಶ್ರೀಮತಿ ಬಿ ಎಸ್ ದಿವ್ಯಾ
ಹುಟ್ಟೂರು:ಮರಳವಾಡಿ, ರಾಮನಗರ ಜಿಲ್ಲೆ
ಸೋಮಣ್ಣ ಅವರ ರಾಜಕೀಯ ಜೀವನ 1983ರಿಂದ ಆರಂಭವಾಯಿತು. ಯಾವುದೇ ಗಾಡ್ ಫಾದರ್ ಗಳ ಬಲ ಇಲ್ಲದೆ, ರಾಜಕೀಯ ಕುಟುಂಬದ ಹಿನ್ನೆಲೆಯ ಬೆಂಬಲ ಹೊಂದಿಲ್ಲದೆ, ಕೇವಲ ತಮ್ಮ ಜನಸೇವೆ ಮತ್ತು ಸಂಘಟನಾ ಚಾತುರ್ಯದಿಂದಲೇ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬಂದು ಜನಪ್ರೀತಿ ಹಾಗೂ ಖ್ಯಾತಿ ಗಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇಂದು ಬೀದರ್ ತುದಿಯಿಂದ ಚಾಮರಾಜನಗರದ ತುದಿಯವರೆಗೆ ಸೋಮಣ್ಣ ಅವರಿಗೆ ಅಪಾರ ಬೆಂಬಲಿಗರಿದ್ದಾರೆ. ನಾಡಿನ ಉದ್ದಗಲಕ್ಕೂ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಸ್ಪಷ್ಟ ಕಲ್ಪನೆ ಸೋಮಣ್ಣ ಅವರಿಗಿದೆ..
ಬೆಂಗಳೂರಿನ ಗೋವಿಂದರಾಜನಗರ ಇವರ ಕಾರ್ಯಕ್ಷೇತ್ರ. ಈ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಸೋಮಣ್ಣ ಅವರು ಜನಾನುರಾಗಿ. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಇರಿಸಿಕೊಂಡು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಸೋಮಣ್ಣ ಅವರಿಗೆ ಜನ್ಮದತ್ತವಾಗಿ ಬಂದ ಗುಣ. ಆರ್ಥಿಕ ಅಶಕ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬಡವರಿಗೆ ಆಹಾರ ಸಾಮಗ್ರಿ, ಉಚಿತ ಆರೋಗ್ಯ ಶಿಬಿರಗಳ ಮೂಲಕ ಸಕಾಲಕ್ಕೆ ಸೂಕ್ತ ಚಿಕಿತ್ಸೆ, ಸರಕಾರದ ಆಸರೆ, ಪಿಂಚಣಿ ಇತ್ಯಾದಿ ಎಲ್ಲ ಜನಪರ ಯೋಜನೆ-ಸೌಲಭ್ಯಗಳ ನೆರವು ಕಲ್ಪಿಸುವುದರ ಮೂಲಕ ಸೋಮಣ್ಣ ಅವರು ಕ್ಷೇತ್ರದಲ್ಲಿ 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದಾರೆ.
ಕೋವಿಡ್ ಅಲೆಯಿಂದ ಜನ ಕಂಗೆಟ್ಟ ಸಂದರ್ಭದಲ್ಲಿ ಸೋಮಣ್ಣ ಅವರು ಆಪದ್ಭಾಂಧವರಂತೆ ನೆರವಾಗಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಜನ ಪರಿತಪಿಸುತ್ತಿರುವಾಗ ಸುಮಾರು 50 ಸಾವಿರಕ್ಕೂ ಹೆಚ್ಚು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಉಚಿತವಾಗಿ ಜನರ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಸರಾಗವಾಗಿ ಚಿಕಿತ್ಸೆ ಪಡೆಯಲು ನೆರವಾಗಿದ್ದಾರೆ. ಮಾಸ್ಕ್, ಸ್ಯಾನಿಟೈಸ್ ಸಾಧನಗಳನ್ನು ಪೂರೈಸಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಗಳು ಆಕ್ಸಿಜನ್ ಪಡೆಯಲು ಸಹಾಯ ಮಾಡಿದ್ದಾರೆ.
ಕೇವಲ ಪಕ್ಷ, ರಾಜಕೀಯ ಚಟುವಟಿಕೆಗಳಿಗಷ್ಟೇ ಸೋಮಣ್ಣ ಅವರು ಸೀಮಿತರಲ್ಲ. ಹಲವಾರು ಸಂಘ ಸಂಸ್ಥೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ಗೋ ರಕ್ಷಣಾ ಅಭಿಯಾನ, ದಸರಾ ಸಂಭ್ರಮ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ರಾಜ್ಯದ ಎಲ್ಲ ವೀರಶೈವ ಮಠಾಧೀಶರೊಂದಿಗೆ ಇವರು ಉತ್ತಮ, ನಿಕಟ ಬಾಂಧವ್ಯ ಹೊಂದಿದ್ದಾರೆ. ವೀರಶೈವ ಮಾತ್ರವಲ್ಲ, ಎಲ್ಲ ಸಮುದಾಯಗಳ ಮಠಾಧೀಶರು ಮತ್ತು ಮುಖಂಡರ ಬೆಂಬಲ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ, ಆರ್ಯ ಸೇವಾ ಸದನ ಟ್ರಸ್ಟ್, ಶ್ರೀ ಸರ್ಪಭೂಷಣ ಶಿವಯೋಗಿ ಮಠದ ಟ್ರಸ್ಟ್, ಬಸವ ವೇದಿಕೆ, ಬನಶಂಕರಿ ದೇವಸ್ಥಾನ ಟ್ರಸ್ಟ್, ಬೆಂಗಳೂರು ಉತ್ತರ ಬ್ಯಾಡ್ಮಿಂಟನ್ ಸಂಸ್ಥೆ, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಯಾತ್ರಾ ಕೇಂದ್ರ ಹೀಗೆ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತಮ್ಮ ಸೇವೆಯ ಕೊಡುಗೆ ಅರ್ಪಿಸುತ್ತಿದ್ದಾರೆ.
ಸೋಮಣ್ಣ ಅವರು ಬೆಂಗಳೂರಿನ ವಿ ಎಸ್ ಎಸ್ ಎಜುಕೇಶನ್ ಟ್ರಸ್ಟ್ ಮತ್ತು ಜ್ಞಾನಮಿತ್ರ ಎಜುಕೇಶನ್ ಟ್ರಸ್ಟ್ ನ ಮಾರ್ಗದರ್ಶಕರೂ ಆಗಿದ್ದಾರೆ.