News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ




ಪೊಲೀಸ್ ಅಧಿಕಾರಿಗಳಿಗೆ ಸರಿಯಾಗಿ ಬುದ್ಧಿ ಕಲಿಸಿದ ಸೋಮಣ್ಣ!

ವಿ ಸೋಮಣ್ಣ ಅವರು ಸಜ್ಜನರ ಪಾಲಿಗೆ ಸಜ್ಜನ. ಸಾಧು ಸ್ವಭಾವದವರ ಪಾಲಿಗೆ ಸಾಧು. ಆದರೆ ಅನವಶ್ಯಕವಾಗಿ ಕಿರುಕುಳ ಕೊಡುವ, ದರ್ಪ ತೋರುವವರಿಗೆ ಸಿಂಹಸ್ವಪ್ನವೂ ಹೌದು. ಹೀಗೆ ನಖರಾ ಮಾಡುವ ಪೊಲೀಸ್ ಅಧಿಕಾರಿಗಳನ್ನೂ ಇವರು ಸುಮ್ಮನೆ ಬಿಟ್ಟವರಲ್ಲ.

ಇದನ್ನು ಸೋಮಣ್ಣ ಅವರ ಮಾತುಗಳಲ್ಲೇ ಓದಿ:

ಮೊದಲ ಬಾರಿ ನಾನು 1983ರಲ್ಲಿ ವಿಜಯ ನಗರ ವಾರ್ಡ್ ನಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದೆ. ಆಗ ವಿಜಯನಗರದಲ್ಲಿ ದಪ್ಪ ಮೀಸೆಯ ಸಬ್ ಇನ್ಸ್ ಪೆಕ್ಟರ್ ಒಬ್ಬರು ಆ ಏರಿಯಾದಲ್ಲಿ ತುಂಬಾ ದರ್ಪದಿಂದ ಬುಲೆಟ್ ಬೈಕ್ ನಲ್ಲಿ ಓಡಾಡುತ್ತಿದ್ದರು. ಅವರೆಂದರೆ ಅಲ್ಲಿಯ ಜನಸಾಮಾನ್ಯರು ಗಡಗಡ ನಡುಗುತ್ತಿದ್ದರು

ನಾನು ನಾಮಪತ್ರ ಸಲ್ಲಿಸಿ ಪ್ರಚಾರ ಶುರು ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ವಕಾಲತು ವಹಿಸಿದ ಆ ದಪ್ಪ ಮೀಸೆಯ ಎಸ್ ಐ ನನ್ನ ಪರ ಪ್ರಚಾರ ಮಾಡುವ ಕಾರ್ಯಕರ್ತರನ್ನು ಬೆದರಿಸಲಾರಂಭಿಸಿದರು. ಒಂದಿಷ್ಟು ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಎಳೆದೊಯ್ದು ಹಲ್ಲೆ ಮಾಡಿದರು. ಈ ಬಗ್ಗೆ ವಿಚಾರಿಸಲು ಹೋದ ನಮ್ಮ ಪಕ್ಷದ ಕೆಲವು ಸ್ಥಳೀಯ ನಾಯಕರನ್ನು ಅಮಾನುಷವಾಗಿ ಥಳಿಸಿದರು.

ಇದನ್ನು ಕೇಳಿ ನನ್ನ ಕೋಪ ನೆತ್ತಿಗೇರಿತು. ನಾನು ಸೀದಾ ಸ್ಟೆಷನ್ ಗೆ ಹೋದೆ. ಆ ದರ್ಪದ ಎಸ್ ಐ ಚೇಂಬರ್ ನೊಳಗೆ ನುಗ್ಗಿದೆ. ಕುರ್ಚಿ ಎಳೆದುಕೊಂಡು ಕೂರಲು ಹೋದರೆ, ಏಯ್ ಯಾವನ್ ನೀನು? ಕೈ ಕಟ್ಟಿಕೊಂಡು ನಿಂತುಕೋ ಎಂದು ನನಗೇ ಆವಾಜ್ ಹಾಕಿದರು. ಚೇರ್ ನಿಮ್ಮಪ್ಪಂದಾ ಎಂದರು. ನನಗೆ ಸಿಟ್ಟು ನೆತ್ತಿಗೇರಿತು. ನಾನೂ ಅವರಿಗೆ ಅಷ್ಟೇ ಜೋರಾಗಿ ಆವಾಜ್ ಹಾಕಿದೆ. ಆ ಎಸ್ ಐ ಇದನ್ನು ನಿರೀಕ್ಷಿರಲಿಲ್ಲ. ಅಲ್ಲಿಯ ಫೋನ್ ಎತ್ತಿಕೊಂಡು ಸೀದಾ ದೇವೇಗೌಡರಿಗೆ ಕಾಲ್ ಮಾಡಿ, ಪೊಲೀಸ್ ಅಧಿಕಾರಿಯ ದಬ್ಬಾಳಿಕೆಯನ್ನು ವಿವರಿಸಿದೆ. ಆಗವರು ಲೋಕೋಪಯೋಗಿ ಮಿನಿಸ್ಟರ್. ಗೌಡರು, ಕೊಡು ಅವನಿಗೆ ಫೋನು ಎಂದರು. ಎಸ್ ಐಯನ್ನು ತರಾಟೆಗೆ ತೆಗೆದುಕೊಂಡರು.

ದೇವೇಗೌಡರ ಆ್ಯಕ್ಷನ್ ಪರಿಣಾಮವಾಗಿ, ಎಸಿಪಿಯಾಗಿದ್ದ ಅಶ್ವತ್ಥ ನಾರಾಯಣಪ್ಪ, ಡಿಸಿಪಿ ನಾಗರಾಜ್ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಧಾವಿಸಿ ಬಂದು ಆ ದುರಹಂಕಾರಿ ಎಸ್ ಐಗೆ ಕ್ಲಾಸ್ ತೆಗೆದುಕೊಂಡರು. ನನ್ನ ಆರ್ಭಟದ ಎದುರು ಆ ಎಸ್ ಐ ಥಂಡಾ ಹೊಡೆದು ಬಿಟ್ಟರು. ನಮ್ಮ ಕಾರ್ಯಕರ್ತರನ್ನೆಲ್ಲ ಬಿಟ್ಟು ಕಳಿಸಿದರು. ಮುಂದೆ ಆ ದಪ್ಪ ಮೀಸೆಯ ಪೊಲೀಸ್ ಅಧಿಕಾರಿ ನನಗೂ ಆತ್ಮೀಯರಾಗಿ ಬದಲಾದರು!

ಸೂಪರ್ ಕಾಪ್ ಗೆ ನಡುಬೀದಿ ಮರ್ಯಾದೆ!

ಇನ್ನೊಂದು ಘಟನೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಒಬ್ಬರು ತಮ್ಮನ್ನು ತಾವು ಸೂಪರ್ ಕಾಪ್ ಎಂದುಕೊಳ್ಳುತ್ತ ಪೋಸ್ ಕೊಡುತ್ತಿದ್ದರು. ಅವರ ಬಗ್ಗೆ ಸಿನಿಮಾ ಕೂಡ ಬಂದು ಸೂಪರ್‌ ಹಿಟ್ ಆಯಿತು. ವಾಸ್ತವಿಕವಾಗಿ ಅವರೊಬ್ಬ ಮಹಾ ಪುಕ್ಕಲು ಅಧಿಕಾರಿ. ಜನ ಪೀಡಕ. ವೇಸ್ಟ್ ಬಾಡಿ. ಅವರು ಮಾಡಿಯೇ ಇಲ್ಲದ ಸಾಹಸಗಳ ಬಗ್ಗೆ ಸಿನಿಮಾ ಆಗಿದ್ದು ಒಂದು ಜೋಕ್!

ಆ ಅಧಿಕಾರಿ ಜನಸಾಮಾನ್ಯರಿಗೆ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದರು. ರಸ್ತೆಯಲ್ಲಿ ಸೈಕಲ್ ಹೊಡೆಯುವಂತಿಲ್ಲ, ರಸ್ತೆ ಬದಿ ಬಡಪಾಯಿಗಳು ವ್ಯಾಪಾರ ಮಾಡುವಂತಿಲ್ಲ, ಯಾರಾದರು ಸತ್ತರೂ ಅವರ ಮನೆ ಮುಂದೆ ಟೆಂಟ್ ಹಾಕುವಂತಿಲ್ಲ ಇತ್ಯಾದಿ ಜನಪೀಡಕ ರೂಲ್ಸ್ ಮಾಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದರು. ಅವರಿಗೆ ಬುದ್ಧಿ ಕಲಿಸಬೇಕು ಎಂದು ನಾನೂ ಸಮಯ ಕಾಯುತ್ತಿದ್ದೆ.

ನನ್ನ ಒಂದಿಷ್ಟು ಶಿಷ್ಯರಿಗೆ ಹೇಳಿ ವಿಜಯನಗರದಲ್ಲಿ ಆ ಸೂಪ್ ಕಾಪ್ ಗೆ ಭರ್ಜರಿ ಸನ್ಮಾನ ಏರ್ಪಡಿಸಿದೆ. ರಸ್ತೆಯಲ್ಲಿ ದೊಡ್ಡದಾಗಿ ಟೆಂಟ್ ಹಾಕಿಸಿದೆ. ಪೊಲೀಸರು ಇದನ್ನು ವಿರೋಧಿಸಲಿಲ್ಲ. ಇನ್ನೇನು ಆ ಪೊಲೀಸ್ ಕಮಿಷನರ್ ಆಗಮನಕ್ಕೆ ಕೆಲವೇ ನಿಮಿಷ ಇದೆ ಎನ್ನುವಾಗ ನಮ್ಮ ಹುಡುಗರನ್ನ ಕಳುಹಿಸಿ, ಪೊಲೀಸ್ ನಿಯಮದ ಪ್ರಕಾರ ರಸ್ತೆಯಲ್ಲಿ ಟೆಂಟ್ ಹಾಕುವ ಹಾಗಿಲ್ಲ ಎಂಬ ನೆಪ ಹೇಳಿ ಟೆಂಟ್ ಗಳನ್ನು ಕಿತ್ತು ಒಗೆಸಿದೆ. ಸೂಪರ್ ಕಾಪ್ ಪೊಲೀಸ್ ಕಮಿಷನರ್ ನಡು ಬೀದಿಯಲ್ಲಿ, ರಣ ಬಿಸಿಲಲ್ಲಿ ಸನ್ಮಾನ ಸ್ವೀಕಾರ ಮಾಡುವಂಥ ಪರಿಸ್ಥಿತಿ ತಂದಿಟ್ಟೆ. ಈ ಪೊಲೀಸ್ ಕಮಿಷನರ್ ಮಾಡಿದ ರೂಲ್ಸ್ ಕಮಿಷನರ್ ಗೇ ಮುಳುವಾಯ್ತು ನೋಡಿ, ಸೋಮಣ್ಣ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಜನ ಮಾತನಾಡಿಕೊಂಡರು!