ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವ. ಹಗಲೂರಾತ್ರಿ ನನಗೆ ನಾನಾ ಯೋಜನೆಗಳ ಜಾರಿಯದ್ದೇ ಧ್ಯಾನ. ಬೆಳಗ್ಗೆ ಆರು ಗಂಟೆಗೇ ಸ್ಪಾಟ್ ಗೆ ಹೋಗಿ ಹಿರಿಯ ಅಧಿಕಾರಿಗಳನ್ನು ಕರೆಸುತ್ತಿದ್ದೆ.
ಈ ನಡುವೆ, ಸೋಮಣ್ಣ ಅಧಿಕಾರಿಗಳಿಗೆ ಕಿರುಕುಳ ಕೊಡ್ತಾನೆ ಅಂತ ಯಾರೋ ಪಟೇಲರಿಗೆ ಚಾಡಿ ಹೇಳಿದರು. ಬಿಡಿಎ ಕಮಿಷನರ್ ಆಗಿದ್ದ ಲಕ್ಷ್ಮೀ ವೆಂಕಟಾಚಲಂ, ಕಾರ್ಪೊರೇಷನ್ ಕಮಿಷನರ್ ಆಗಿದ್ದ ಕೆ ಪಿ ಪಾಂಡೆ ಮತ್ತಿತರ ಅಧಿಕಾರಿಗಳನ್ನು ಒಂದಿನ ಏನೋ ನೆಪ ಮಾಡಿಕೊಂಡು ಜೆ ಎಚ್ ಪಟೇಲರ ಬಳಿ ಕರೆದುಕೊಂಡು ಹೋದೆ. ಮುಖ್ಯ ಕಾರ್ಯದರ್ಶಿ ಭಟ್ಟಾಚಾರ್ಯ ಕೂಡ ಅಲ್ಲಿದ್ದರು.
ಅಧಿಕಾರಿಗಳೇ ನೇರವಾಗಿ ಹೇಳಿ. ನಾನು ನಿಮಗೆಲ್ಲ ಕಿರುಕುಳ ಕೊಡುತ್ತೇನಾ ಎಂದು ಪ್ರಶ್ನಿಸಿದೆ. ಛೆ ಛೆ! ನಿಮ್ಮಂಥ ಕ್ರಿಯಾಶೀಲ ಮಂತ್ರಿಗಳನ್ನು ನಾವು ನಮ್ಮ ಜೀವನದಲ್ಲೇ ನೋಡಿಲ್ಲ ಎಂದು ಬಿಟ್ಟರು. ಬೆಂಗಳೂರು ನಗರಾಭಿವೃದ್ಧಿ ಕುರಿತ ನನ್ನ ದೂರದೃಷ್ಟಿ, ಯೋಜನೆಗಳ ತ್ವರಿತ ಜಾರಿಯತ್ತ ನನ್ನ ಕಾರ್ಯಶೈಲಿ ಇತ್ಯಾದಿಗಳ ಕುರಿತು ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಎದುರು ಶ್ಲಾಘಿಸಿದರು. ಪಟೇಲರು ನನ್ನತ್ತ ಬೆರಗಿನಿಂದ ನೋಡಿದರು!
ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವ ಆಗಿದ್ದಾಗ ಕೆ ಆರ್ ಮಾರ್ಕೆಟ್, ಮೇಖ್ರಿ ಸರ್ಕಲ್, ಹೆಬ್ಬಾಳ ಸರ್ಕಲ್ ಮತ್ತಿತರ ಕಡೆ ಫ್ಲೈ ಓವರ್-ಅಂಡರ್ ಪಾಸ್, ರಿಂಗ್ ರಸ್ತೆ, ಕಾವೇರಿ 4ನೇ ಹಂತದ ಯೋಜನೆ, ರೆವಿನ್ಯೂ ಸೈಟ್ ಗಳ ಅಕ್ರಮ ಸಕ್ರಮ ಇತ್ಯಾದಿ ಹತ್ತು ಹಲವು ಅಭೂತಪೂರ್ವ ಯೋಜನೆಗಳು, ಜನಪರ ನೀತಿಗಳು ಜಾರಿಗೆ ಬಂದವು. ಆದರೆ ಇವೆಲ್ಲ ನಾನೊಬ್ಬನೇ ಮಾಡಿದ್ದು ಎಂದು ಹೇಳಿಕೊಳ್ಳಲಾರೆ. ಪಟೇಲರಂಥ ಸಮರ್ಥ ಮುಖ್ಯಮಂತ್ರಿ ಮತ್ತು ಹಲವು ದಕ್ಷ ಅಧಿಕಾರಿಗಳ ಅವಿರತ ಶ್ರಮದ ಪ್ರತಿಫಲ ಇದು.
ಬಿಡಿಎಗೆ ಲಕ್ಷ್ಮೀ ವೆಂಕಟಾಚಲಂ, ಕಾರ್ಪೊರೇಷನ್ ಗೆ ಕೆ ಪಿ ಪಾಂಡೆ ಇದ್ದ ಹಾಗೆ, ಜಲ ಮಂಡಳಿಗೆ ಜೆ ಪಿ ಶರ್ಮಾ ಕಮಿಷನರ್ ಆಗಿದ್ದರು. ಅಂದಿನ ಕೆಇಬಿಗೆ ಗುರುಚರಣ್ ಸಿಂಗ್ ಟೆಕ್ನಿಕಲ್ ಡೈರೆಕ್ಟರ್ ಆಗಿದ್ದರು. ಇಂಥ ಪ್ರಾಮಾಣಿಕ ಅಧಿಕಾರಿಗಳು ನಮ್ಮ ದೊಡ್ಡ ಆಸ್ತಿ. ಇಂಥ ಮಹಾನುಭಾವರ ಜತೆ ಸೇರಿ ಬೆಂಗಳೂರು ಮಹಾನಗರಕ್ಕೆ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ನನಗಿದೆ.
ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಜಲ ಮಂಡಳಿಯನ್ನು ಖಾಸಗೀಕರಣ ಮಾಡಲು ಹೊರಟಿದ್ದರು. ಅಧಿವೇಶನದಲ್ಲಿ ನಾನು ಇದರ ವಿರುದ್ಧ ಎರಡು ಗಂಟೆ ಮಾತನಾಡಿದೆ. ಇದಕ್ಕೆ ಉತ್ತರ ಕೊಡುವಾಗ ಅಂದಿನ ಸಿಎಂ ಕೃಷ್ಣ ಅವರು ''ಮುತ್ಸದ್ದಿಗಳು, ಮೇಧಾವಿಗಳೂ ಆದ ಶ್ರೀಯುತರು'' ಎಂದು ನನಗೆ ಗೇಲಿ ಮಾಡಲು ನೋಡಿದರು. ಸ್ವಾಮೀ, ನಾನು ಸಾಮಾನ್ಯ ಜ್ಞಾನ ಅಷ್ಟೇ ಇರುವ ಜನಪ್ರತಿನಿಧಿ. ಜಲ ಮಂಡಳಿ ಖಾಸಗೀಕರಣ ನಿರ್ಣಯ ವಾಪಸ್ ಪಡೆಯಬೇಕು ಎಂದು ವಾದಿಸಿದೆ. ಕೊನೆಗೂ ಅವರು ತಮ್ಮ ನಿರ್ಧಾರ ಬದಲಿಸಿದರು. ಜಲ ಮಂಡಳಿ ಉಳಿಯಿತು.
ಬೆಂಗಳೂರಿಗರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಜಲ ಮಂಡಳಿಯ ಪಾತ್ರ ಅತಿ ಪ್ರಮುಖ. ಇಂಥ ಸ್ವಾಯತ್ತ ಸಂಸ್ಥೆಯನ್ನು ಸ್ವಾಯತ್ತವಾಗಿಯೇ ಉಳಿಸಬೇಕು ಮತ್ತು ಅದಕ್ಕೆ ಶಕ್ತಿ ತುಂಬಬೇಕು ಎನ್ನುವುದು ನನ್ನ ಚಿಂತನೆಯಾಗಿತ್ತು.
ಆಗ ನೂರಾರು ಹಿರಿಯ ಕಿರಿಯ ಅಧಿಕಾರಿಗಳ ಫೋನ್ ನಂಬರ್ ನನ್ನ ಬಾಯಿಯಲ್ಲೆ ಇತ್ತು. ಎಲ್ಲಿ ಏನೇ ಸಮಸ್ಯೆ ಆದರೂ ನಾನೇ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡುತ್ತಿದ್ದೆ. ನಾನಾ ಇಲಾಖೆಗಳಿಗೆ ನಾನೇ ಪತ್ರ ಬರೆಯುತ್ತಿದ್ದೆ. ಕಾಮಗಾರಿಗಳು ನಡೆಯುತ್ತಿರುವ ಜಾಗಕ್ಕೆ ಬೆಳಗಿನ ಜಾವಕ್ಕೇ ನಿರಂತರವಾಗಿ ಭೇಟಿ ಕೊಟ್ಟು ಪರಿಶೀಲಿಸುತ್ತಿದ್ದೆ. ಅಗತ್ಯ ಬಿದ್ದಾಗ ನಿವೃತ್ತ ಅಧಿಕಾರಿಗಳ ಸಲಹೆ ಪಡೆಯುತ್ತಿದ್ದೆ.
ಬೆಂಗಳೂರು ಮಹಾನಗರದ ನಿರ್ವಹಣೆ ಸುಲಭವಲ್ಲ. ಕೆಂಪೇಗೌಡರ ಬೆಂಗಳೂರು ಇಂದು ಸಾವಿರ ಪಟ್ಟು ಬೆಳೆದಿದೆ. ಬೆಂಗಳೂರು ಇರೋದೇ ಯೋಜನಾ ಬದ್ಧ ನಗರ ಮಾಡೋಕೆ. ಆದರೆ ಎಲ್ಲರೂ ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಮೂಲದ್ರವ್ಯವಾಗಿದ್ದ 700 ಕೆರೆಗಳು ಈಗೆಲ್ಲಿ? ರಾಜ್ಯದ ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಹಾಗಾಗಿ ಬೆಂಗಳೂರಿಗೆ ನಾವು ಎಷ್ಟು ಆದ್ಯತೆ ಕೊಟ್ಟರೂ ಕಡಿಮೆಯೇ.