News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ

ಜನತಾ ಬಜಾರ್ ನಿಂದ ಜನತಾ ಪಕ್ಷಕ್ಕೆ

ಜನತಾ ಬಜಾರ್ ಯೂನಿಯನ್ ನಲ್ಲಿ ನಾನು ಮುಂಚೂಣಿ ನಾಯಕನಾಗಿ ಬೆಳೆದೆ. ಸಹಜವಾಗಿಯೇ ದೇವೇಗೌಡರು, ಬಿ ಎಲ್ ಶಂಕರ್, ಪಿ ಜಿ ಆರ್ ಸಿಂಧಿಯಾ ಮತ್ತಿತರ ಸಂಪರ್ಕಕ್ಕೆ ಬಂದೆ. ಅವರ ಮೂಲಕ ನಾನು ಅನಧಿಕೃತವಾಗಿ ಜನತಾ ಪಕ್ಷಕ್ಕೆ ಎಂಟ್ರಿ ಪಡೆದೆ. ಈ ನಡುವೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡಿದ್ದ ಆಂದೋಲನದಲ್ಲೂ ಕೈ ಜೋಡಿಸಿದೆ. ಚಂದ್ರಶೇಖರ ಅವರು ನಡೆಸಿದ ರಾಷ್ಟ್ರವ್ಯಾಪಿ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದೆ.

1986ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧಿಯಾ ಪರ ಸಕ್ರಿಯವಾಗಿ ಕೆಲಸ ಮಾಡಿದೆ. ಅದೇ ವರ್ಷ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ಘೋಷಣೆ ಆಯಿತು. ಮುನಿಯಪ್ಪ ಅಂತ ಒಬ್ಬರು ರೆವಿನ್ಯು ಇನ್ಸ್ ಪೆಕ್ಟರ್ ನನಗೆ ಆತ್ಮೀಯರಾಗಿದ್ದರು. ಅವರು, ಸೋಮಣ್ಣ ನೀನೂ ಎಲೆಕ್ಷನ್ ಗೆ ನಿಂತು ಬಿಡು ಎಂದು ಹುರಿದುಂಬಿಸಿದರು. ನನಗೂ ಉಮೇದು ಬಂತು. ವಿಜಯ ನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಟಿಕೆಟ್‌ ಕೊಡುವ ಭರವಸೆಯೂ ಸಿಕ್ಕಿತು. ಆದರೆ ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೀವರಾಜ್ ಆಳ್ವ, ರಘುಪತಿ ಇನ್ನೂ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲು ಶತಪ್ರಯತ್ನ ನಡೆಸಿದರು.

ಡಿ ಮಂಜುನಾಥ್ ಆಗ ಜನತಾ ಪಕ್ಷದ ರಾಜ್ಯಾಧ್ಯಕ್ಷರು. ಮಂಜುನಾಥ್, ವಿ ಆರ್ ಕೃಷ್ಣಯ್ಯರ್, ಟಿ ಆರ್ ಶಾಮಣ್ಣ, ಎಚ್ ಡಿ ದೇವೇಗೌಡ, ಬಿ ಎಲ್ ಶಂಕರ್ ಮತ್ತಿತರರನ್ನು ಸಂಪರ್ಕಿಸಿ ನಾನು ಟಿಕೆಟ್ ಗೆ ಪಟ್ಟು ಹಿಡಿದೆ. ಇದಕ್ಕಾಗಿ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಅವರನ್ನೂ ಸಂಪರ್ಕಿಸಿ ವಿನಂತಿಸಿದೆ. ಆದರೆ ಕೊನೆಗೆ ಬಿ ಎಲ್ ಶಂಕರ್ ಒಬ್ಬರು ಮಾತ್ರ ನನ್ನ ಪರವಾಗಿ ನಿಂತರು. ಅಂತಿಮವಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋದೆ. ಕನಕಪುರ ಬೈ ಎಲೆಕ್ಷನ್ ನಲ್ಲಿ ಹೆಗಡೆ ಅವರಿಗಾಗಿ ಸಿಂಧಿಯಾ ರಾಜೀನಾಮೆ ನೀಡಿದ್ದರು. ಹೆಗಡೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೆಲ್ಲ ಶಕ್ತಿ ಪ್ರಯೋಗದಲ್ಲಿ ತೊಡಗಿದ್ದರು. ನಾನು ಯುವಕರ ತಂಡ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರನ್ನು ದಿಗ್ಬಂಧನ ಹಾಕಿ ನೀರಿಳಿಸಿದ್ದು ಹೆಗಡೆ ಅವರಿಗೆ ತಿಳಿದಿತ್ತು. ಹಾಗಾಗಿ ಹೆಗಡೆ ಅವರು ಕೃಪೆಯಿಂದಾಗಿ ಕೊನೆಗೂ ಬಿ ಫಾರಂ ಸಿಕ್ಕಿತು. ನಾನು ನಾಮಪತ್ರ ಸಲ್ಲಿಸಿದೆ. ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬೆಂಬಲವೂ ನನಗೆ ಸಿಕ್ಕಿತು.




ನಮ್ಮ ಸೋಮಣ್ಣ

ಈ ನಡುವೆ, ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಒಯ್ದು ಹಲ್ಲೆ ನಡೆಸಿದ ದುರಹಂಕಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನಾನು ಸಖತ್ತಾಗಿ ಬೆಂಡೆತ್ತಿದ ಘಟನೆಯಿಂದಾಗಿ ಇಡೀ ವಾರ್ಡ್ ನಲ್ಲಿ ನನ್ನ ಹವಾ ಜೋರಾಯಿತು. ನಾನು ಭಾರಿ ಬಹುಮತದಿಂದ ಗೆಲುವು ಸಾಧಿಸಿದೆ. ಆಗ ಆ ವಾರ್ಡ್ ನಲ್ಲಿ ಏನೇನೂ ಮೂಲಸೌಕರ್ಯ ಇರಲಿಲ್ಲ. ಶಾಂತಿ ಸುವ್ಯವಸ್ಥೆ ಕೂಡ ಕಳವಳಕಾರಿಯಾಗಿತ್ತು. ನಾನು ಹಂತಹಂತವಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುತ್ತ, ಮೂಲ ಸೌಕರ್ಯ ಕಲ್ಪಿಸುತ್ತ ಬಂದೆ. ಹಾಗಾಗಿ ಮುಂದಿನ 1987ರ ಕಾರ್ಪೊರೇಷನ್ ಚುನಾವಣೆಯಲ್ಲೂ ಭರ್ಜರಿ ಗೆಲುವು ನನ್ನದಾಯಿತು.

ಬಿನ್ನಿಪೇಟೆಯಿಂದ ವಿಧಾನಸಭೆ ಪ್ರವೇಶ...

ಎರಡು ಅವಧಿಗೆ ಕಾರ್ಪೋರೇಟರ್ ಆಗಿ ಜನಪ್ರಿಯತೆ ಗಳಿಸಿದ್ದ ನನಗೆ 1994ರಲ್ಲಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಜನತಾ ಪಕ್ಷದ ಟಿಕೆಟ್ ಸಿಕ್ಕಿತು. ದಾಖಲೆ ಮತಗಳ ಅಂತರದಿಂದ ಗೆದ್ದೆ.

ಆದರೆ ಮುಖ್ಯಮಂತ್ರಿಯಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಪೈಪೋಟಿ ನಡೆದು ರಣರಂಪವಾಯಿತು. ನಾನು ದೇವೇಗೌಡರ ಪರ ನಿಂತೆ. ನ್ಯಾಯಯುತವಾಗಿ ದೇವೇಗೌಡರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ವಿಂಡ್ಸರ್ ಮ್ಯಾನರ್ ನನ್ನನ್ನು ಕರೆಸಿದರು. ಅಲ್ಲಿ ಹೆಗಡೆ, ಜೆ ಎಚ್ ಪಟೇಲ್ ಮತ್ತು ಬೊಮ್ಮಾಯಿ ಚಿಂತಾಕ್ರಾಂತರಾಗಿ ಕೂತಿದ್ದರು. ಹೆಗಡೆ ಮನೆ ಬಳಿ ಮತ್ತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಭಾರಿ ಗದ್ದಲದ ಕುರಿತಾಗಿ ನನ್ನಿಂದ ಮಾಹಿತಿ ಪಡೆದರು. ನಾನು ಇದ್ದ ವಿಷಯ ವಿವರಿಸಿದೆ. ಹೆಗಡೆಯವರು ಗರಂ ಆಗಿದ್ದರು. ಬೊಮ್ಮಾಯಿಯವರು ಸೂಕ್ಷ್ಮವಾಗಿ ನನಗೊಂದು ಬುದ್ಧಿಮಾತು ಹೇಳಿ ಕಳುಹಿಸಿದರು!

ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ನನ್ನನ್ನು ಮಂತ್ರಿ ಮಾಡಲೇ ಇಲ್ಲ! ನಿನ್ನನ್ನು ಮಂತ್ರಿ ಮಾಡಿದರೆ ಹೆಗಡೆಯವರು ತಕರಾರು ಮಾಡ್ತಾರೆ, ಸದ್ಯ ಸುಮ್ಮನಿರು ಎಂದರು!

ಮುಂದೆ ಅನಿರೀಕ್ಷಿತವಾಗಿ ದೇವೇಗೌಡರು ಪ್ರಧಾನಿಯಾದರು. ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಪೈಪೋಟಿ ಶುರುವಾಯಿತು. ನಾವು 86 ಮಂದಿ ಸಿದ್ದರಾಮಯ್ಯ ಪರ ಸಹಿ ಮಾಡಿ ಪತ್ರ ರೆಡಿ ಮಾಡಿದೆವು. ಆದರೆ ಆ ಪತ್ರ ವರಿಷ್ಠರಿಗೆ ತಲುಪಿಸುವ ಧೈರ್ಯ ಯಾರೂ ಮಾಡಲಿಲ್ಲ. ನಾನೊಬ್ಬನೆ ಆ ಪತ್ರ ಹಿಡಿದು, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಜನತಾದಳ ರಾಷ್ಟ್ರ ಮಟ್ಟದ ನಾಯಕರಾದ ಬಿಜು ಪಟ್ನಾಯಕ್, ಮಧು ದಂಡವತೆ ಬಳಿ ಹೋಗಿದ್ದೆ. ಅಲ್ಲೇ ಇದ್ದ ಪಟೇಲರು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನನ್ನು ಪ್ರಶ್ನಿಸಿದರು! ನಾನು ಏನೋ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ನಾಟಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾಡದೆ ಜೆ ಎಚ್ ಪಟೇಲರನ್ನು ಸಿಎಂ ಮಾಡಲಾಯಿತು. ವಿಶೇಷ ಅಂದರೆ ಪಟೇಲರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು! ನಿನಗೆ ಕೆಲಸ ಬಾರದ ಖಾತೆ ಕೊಡ್ತೇನೆ ನೋಡು ಎಂದು ಗದರಿಸುತ್ತ ಬಂದೀಖಾನೆ ಇತ್ಯಾದಿ ಪ್ರಮುಖವಲ್ಲದ ಖಾತೆ ಕೊಟ್ಟರು. ಯಾವ ಖಾತೆ ಆದರೇನು ಎಂದು ನಾನು ನಿಷ್ಠೆಯಿಂದ ಕೆಲಸ ಮಾಡಿದೆ.

ಸನ್ನಡತೆಯ ಕೈದಿಗಳ ಬಿಡುಗಡೆ ಸಮಾರಂಭಕ್ಕೆ ಅಂದಿನ ರಾಜ್ಯಪಾಲ ಖರ್ಷಿದ್ ಅಲಂ ಖಾನ್ ಅವರನ್ನು ಕರೆದಿದ್ದೆ. ಪಟೇಲರೂ ಜತೆಗಿದ್ದರು. ಆಗ ರಾಜ್ಯಪಾಲರು ನನ್ನ ಕಾರ್ಯಶೈಲಿ ಬಗ್ಗೆ ಪಟೇಲರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವೋ ಏನೋ‌. ಪಟೇಲರು ನನಗೆ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಖಾತೆಯ ಹೊಣೆಗಾರಿಕೆ ನೀಡಿದರು. ಬೆಂಗಳೂರಿನ ಹಲವಾರು ಫ್ಲೈ ಓವರ್, ಅಂಡರ್ ಪಾಸ್, ಕಾವೇರಿ ನಾಲ್ಕನೇ ಹಂತದ ಯೋಜನೆ ಸೇರಿದಂತೆ ದೂರದೃಷ್ಟಿಯ ಹಲವಾರು ಯೋಜನೆಗಳು ಆಗ ಜಾರಿಗೆ ಬಂದವು.



ನಮ್ಮ ಸೋಮಣ್ಣ

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು...

ಆದರೆ 1999ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜನತಾದಳ ಒಡೆದು ಚೂರಾಗಿತ್ತು. ಯಾವ ಬಣದಲ್ಲಿ ಯಾರಿದ್ದಾರೆ ಎಂದು ತಿಳಿಯಲಾರದಷ್ಟು ಪರಿಸ್ಥಿತಿ ಡೋಲಾಯಮಾನವಾಗಿತ್ತು. ''ನೀನು ಕಾಂಗ್ರೆಸ್ ಸೇರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗೋದು ಖಚಿತ. ನಿನ್ನನ್ನು ಅವರು ಮಂತ್ರಿ ಮಾಡ್ತಾರೆ,'' ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಲಹೆ ನೀಡಿದರು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟೆ. ದಿಲ್ಲಿವರೆಗೂ ಹೋಗಿ ಬಂದೆ. ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದವರು ಕೊನೇ ಕ್ಷಣದಲ್ಲಿ ಕೈ ಎತ್ತಿದರು.


ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಕರೆ ಮಾಡಿ, ನಾಳೆ ಬೆಳಗ್ಗೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು. ನಿನಗೆ ಟಿಕೆಟ್ ಕೊಡದೇ ಇದ್ದುದು ಗೊತ್ತಾಗಿ ಬೇಸರವಾಯಿತು. ನಿನ್ನಂಥ ಕೆಲಸಗಾರ ಈ ಕ್ಷೇತ್ರಕ್ಕೆ ಬೇಕು. ನಿನ್ನ ಬೆಂಬಲಕ್ಕೆ ನಾವಿದ್ದೇವೆ. ಈಗಷ್ಟೇ ಕಾಲಭೈರವನ ಪೂಜೆ ಮುಗಿಸಿ ಬಂದಿದ್ದೇನೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು.

ಮರುದಿನ ನಾಮಪತ್ರ ಸಲ್ಲಿಸುವಾಗ ಸಾವಿರಾರು ಜನ ಸೇರಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ನಾನು ಭಾರೀ ಮತಗಳ ಅಂತರದಿಂದ ಜಯಶಾಲಿಯಾದೆ. ನನ್ನ ಗೆಲುವಿನ ಆರ್ಭಟ ಕಂಡು ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಅಚ್ಚರಿಪಟ್ಟರು.

ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಮೂರನೇ ಬಾರಿ ಆಯ್ಕೆ ಆದೆ. 2008ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದೆ.

2010ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿ ಆಹಾರ-ನಾಗರಿಕ ಪೂರೈಕೆ, ಮುಜರಾಯಿ ಮತ್ತು ವಸತಿ ಸಚಿವನಾಗಿ ಕಾರ್ಯ ನಿರ್ವಹಿಸಿದೆ. 2016ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದೆ. 2019ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದೆ.

ಮೊದಲು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಿದ್ದರು. ಬಳಿಕ 2021ರಲ್ಲಿ ಮಹತ್ವದ ವಸತಿ ಮತ್ತು ಮೂಲ ಸೌಕರ್ಯ ಖಾತೆಗಳ ಹೊಣೆಗಾರಿಕೆ ನೀಡಿದರು.



ನಮ್ಮ ಸೋಮಣ್ಣ