ಜನತಾ ಬಜಾರ್ ನಲ್ಲಿ ನನ್ನ ಸಹೋದ್ಯೋಗಿ ಆಗಿದ್ದ ಕ್ರಿಶ್ಚಿಯನ್ ಸಮುದಾಯದ ಮಹಿಳೆಯೊಬ್ಬರು, ತಮ್ಮ ಗಂಡನಿಗೆ ಪರಿಚಿತರಾಗಿದ್ದ ನಮ್ಮದೇ ಸಮುದಾಯದ ಕುಟುಂಬವೊಂದರ ಬಗ್ಗೆ ಪ್ರಸ್ತಾಪಿಸಿದರು. ತುಂಬಾ ಒಳ್ಳೆಯ ಹುಡುಗಿ. ತಂದೆ ಇತ್ತೀಚೆಗಷ್ಟೇ ತೀರಿಹೋಗಿದ್ದಾರೆ. ವರ್ಷದೊಳಗೆ ಮದುವೆ ಮಾಡಬೇಕಂತೆ. ನೀವೊಮ್ಮೆ ಬಂದು ಹುಡುಗಿಯನ್ನು ನೋಡಿ ಎಂದರು. ಹೊಸಗುಡ್ಡದಹಳ್ಳಿಯಲ್ಲಿ ಅವರ ಮನೆ ಇತ್ತು. ನಾನು ಹೋದೆ. ಹುಡುಗಿ ಶೈಲಜಾ ಮೊದಲ ನೋಟದಲ್ಲೇ ತುಂಬಾ ಇಷ್ಟವಾದರು. ಮದುವೆ ಸೆಟ್ ಆಗಿಯೇ ಬಿಟ್ಟಿತು.
ಆಕೆಯ ಕೈ ಹಿಡಿದ ಬಳಿಕವಂತೂ ನನಗೆ ಶುಕ್ರ ದೆಸೆ ತಿರುಗಿದಂತಾಯಿತು. ಆಕೆಯ ಬೆಂಬಲ, ಪ್ರೀತಿ ವಾತ್ಸಲ್ಯದ ಫಲ... ನನ್ನ ಬದುಕಿನ ಯಶಸ್ಸು ಏರುಗತಿ ಕಂಡಿತು. ನಾನು ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಬಳಿಕವಂತೂ, ಮನೆಯ ಸಮಸ್ತ ಜಬಾಬ್ದಾರಿಯನ್ನು ಶೈಲಜಾ ಹೊತ್ತುಕೊಂಡು ನನ್ನ ಮೇಲಿನ ಭಾರ ಕಡಿಮೆ ಮಾಡಿದರು. ಮೂವರು ಮಕ್ಕಳನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ರೂಪಿಸಿದರು. ಶೈಲಜಾ ನನ್ನ ಬಲು ದೊಡ್ಡ ಶಕ್ತಿ.
ಮೇ 23ಕ್ಕೆ ಅವರ ಸೆಕೆಂಡ್ ಪಿಯುಸಿ ಪರೀಕ್ಷೆ ಮುಗಿದಿತ್ತು. ಮೇ 25ಕ್ಕೆ ನಮ್ಮ ಮದುವೆ. ಮದುವೆ ನಂತರ ಬಿ.ಕಾಂ ಮಾಡಲು ಅವಕಾಶ ಮಾಡಿಕೊಡಬೇಕು ಎನ್ನುವುದೊಂದೇ ಅವರ ಬೇಡಿಕೆಯಾಗಿತ್ತು. ಆದರೆ ಮುಂದೆ ಆಕೆ ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ನನ್ನ ರಾಜಕೀಯ ಹಾದಿಯಲ್ಲಿ ನೆರಳಾಗಿ, ನೆರವಾಗಿ ನಿಂತರು.