ಗೋವಿಂದರಾಜ ನಗರ ಕ್ಷೇತ್ರದ ಹಂಪಿನಗರದಲ್ಲಿರುವ ಹೈಟೆಕ್ ಗ್ರಂಥಾಲಯ, ಅತ್ಯಾಧುನಿಕ ಈಜುಕೊಳ ಮತ್ತು ಸುಸಜ್ಜಿತ ಕ್ರೀಡಾಂಗಣಗಳು ಸೋಮಣ್ಣ ಅವರ ದೂರದೃಷ್ಟಿ ಮತ್ತು ಅಭಿವೃದ್ಧಿ ಪರ್ವದ ಬದ್ಧತೆ-ಆಸ್ಥೆಗೆ ಸಾಕ್ಷಿ.
ಈ ಬಗ್ಗೆ ಡಾ. ಎಂ ಬೈರೇಗೌಡ ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ:
ಬೆಂಗಳೂರಿನ ಹಂಪಿನಗರದಲ್ಲಿ ಏಷ್ಯಾ ಖಂಡದಲ್ಲಿಯೇ ಅತ್ಯಂತ ವ್ಯವಸ್ಥಿತವಾದ ಗ್ರಂಥಾಲಯ ನಿರ್ಮಾಣವಾಗುವುದರಲ್ಲಿ ಸೋಮಣ್ಣ ಅವರ ಕಾಳಜಿ ಅಪಾರ. ಮೂರು ಮಹಡಿಗಳ ಈ ಕಟ್ಟಡದಲ್ಲಿ ರೆಫರೆನ್ಸ್ ವಿಭಾಗ, ಪುಸ್ತಕ ವಿಭಾಗ, ಇಂಟರ್ನೆಟ್ ವಿಭಾಗ, ತಾಂತ್ರಿಕ ವಿಭಾಗ, ಆಡಳಿತ ಕಚೇರಿ ಹಾಗೂ ಅಧಿಕಾರಿಗಳ ಚೇಂಬರ್, ಫೋಟೋ ಐಡೆಂಟಿಟಿ ಕಾರ್ಡ್ ವಿಭಾಗ ಹೇಗೆ ಎಲ್ಲ ವಿಭಾಗಗಳನ್ನು ನವೀನ ರೀತಿಯಲ್ಲಿ ನಿರ್ಮಿಸುವಲ್ಲಿ ಅವರ ಕೊಡುಗೆ ಅಮೂಲ್ಯ. ಅಂದಿನ ಗ್ರಂಥಾಲಯ ಇಲಾಖೆ ರಾಜೇಂದ್ರ ಕುಮಾರ್ ಅವರ ಕಲ್ಪನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ ಕೀರ್ತಿ ಸೋಮಣ್ಣ ಅವರಿಗೆ ಸಲ್ಲುತ್ತದೆ.
ಹಂಪಿನಗರದ ಗ್ರಂಥಾಲಯದಲ್ಲಿ ಬಹಳ ಮುಖ್ಯವಾದ ಒಂದು ವಿಭಾಗವಿದೆ . ಅದೇ ಗ್ರಂಥಾಂಗಣ. ಗ್ರಂಥಾಲಯ ಎಂದರೆ ಕೇವಲ ಪುಸ್ತಕಗಳನ್ನು ಓದುವುದು, ಎರವಲು ಪಡೆದು ಬದಲಾಯಿಸಿಕೊಳ್ಳುವುದು, ಪ್ರಕಾಶಕರಿಂದ ಪುಸ್ತಕಗಳನ್ನು ಕೊಂಡುಕೊಳ್ಳುವುದು ಇವಿಷ್ಟೇ ಅಲ್ಲ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಜನರಲ್ಲಿ ಸಂಸ್ಕೃತಿ, ಕಲಾಭಿರುಚಿ ಬೆಳೆಸಬೇಕೆಂಬ ಹೊರದೇಶದ ಕಲ್ಪನೆಗಳನ್ನು ಸೋಮಣ್ಣ ಅವರ ಗಮನಕ್ಕೆ ರಾಜೇಂದ್ರ ಕುಮಾರ್ ತಂದ ಪರಿಣಾಮವಾಗಿ ಅತ್ಯಂತ ವ್ಯವಸ್ಥಿತವಾಗಿ ಗ್ರಂಥಾಂಗಣ ನಿರ್ಮಾಣವಾಯಿತು. ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಇರುವ ಸಭಾಭವನಕ್ಕೆ ಗ್ರಂಥಾಂಗಣ ಎಂಬ ಅನ್ವರ್ಥನಾಮವೇನೋ ಕೊಟ್ಟಾಯಿತು. ಆದರೆ ಅಲ್ಲಿ ಚಟುವಟಿಕೆಗಳು ಆರಂಭವಾಗಲೇ ಇಲ್ಲ. ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಲೇ ಇಲ್ಲವಲ್ಲ ಎಂದು ರಾಜೇಂದ್ರ ಕುಮಾರ್ ಬೇಸರದಿಂದ ಹೇಳಿದರು. ಇದ್ದಕ್ಕಿದ್ದಂತೆ ನನಗೆ ಒಂದು ಶೀರ್ಷಿಕೆ ಹೊಳೆಯಿತು 'ಓದಿನ ಅರಮನೆಯಲ್ಲಿ ತಿಂಗಳ ಒನಪು' ಅಂತ. ಇದನ್ನು ಕೇಳುತ್ತಿದ್ದಂತೆ ಮರುಮಾತನಾಡದೆ ರಾಜೇಂದ್ರ ಕುಮಾರ್ ಒಪ್ಪಿಕೊಂಡರು. ಕೂಡಲೇ ಶಾಸಕ ವಿ ಸೋಮಣ್ಣ ಅವರ ಗಮನಕ್ಕೆ ತರಲಾಯಿತು. ಅತ್ಯಂತ ಸಂತೋಷದಿಂದ ಅವರು ಇದನ್ನು ಒಪ್ಪಿಕೊಂಡು ಪ್ರೋತ್ಸಾಹಿಸಿದರು. ಕರಪತ್ರಗಳು, ಆಹ್ವಾನ ಪತ್ರಗಳನ್ನು ಮುದ್ರಿಸಿ ಬಡಾವಣೆಯಲ್ಲೆಲ್ಲ ಹಂಚಿ, ಇಂಥದೊಂದು ಕಾರ್ಯಕ್ರಮ ನಡೆಯುತ್ತದೆ ಎಂಬುದನ್ನು ಪ್ರಚಾರ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದ ಮತ್ತು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ವೈ ಕೆ ಮುದ್ದುಕೃಷ್ಣ ಅವರು ನಾಡಿನ ಸುಗಮ ಸಂಗೀತ ಕ್ಷೇತ್ರದ ಖ್ಯಾತ ಹೆಸರುಗಳಾದ ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಇಂದು ವಿಶ್ವನಾಥ್, ಸಂಗೀತಾ ಕಟ್ಟಿ, ಕಿಕ್ಕೇರಿ ಕೃಷ್ಣಮೂರ್ತಿ ಮುಂತಾದ ಕಲಾವಿದರನ್ನು ಕರೆತಂದು ಹಂಪಿನಗರ ಬಡಾವಣೆಯ ಜನರಿಗೆ ಸುಗಮ ಸಂಗೀತದ ರಸದೌತಣ ನೀಡಲಾಯಿತು. ಸೋಮಣ್ಣ ಅವರ ಕರ್ತೃತ್ವ ಶಕ್ತಿಯ ಕಾರಣದಿಂದ ಇಂಥದೊಂದು ಅಪರೂಪವೆನಿಸಿದ ಕಾರ್ಯಕ್ರಮ ನಡೆಯುವಂತಾಯಿತು. ಈವರೆಗೆ ಇಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳು ನಡೆದಿವೆ.
ಆದರೆ ಸೋಮಣ್ಣ ಅವರು ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಕ್ಕೆ ಹೋದ ಬಳಿಕ, ಹೈಟೆಕ್ ಗ್ರಂಥಾಲಯವೂ ಸೇರಿದಂತೆ ಅವರ ಕಲ್ಪನೆಯ ಹಲವಾರು ಕೂಸುಗಳು ಅನಾಥವಾಗಿವೆ ಎಂಬ ಬೇಸರ ಅಲ್ಲಿಯ ನಿವಾಸಿಗಳದ್ದಾಗಿದೆ...
ಡಿಜಿಟಲ್ ಗ್ರಂಥಾಲಯದ ಹಿಂದೆ ಮಹಾ ಮಾಯಾವಿ ವಿ ಸೋಮಣ್ಣ ಅವರ ಪರಿಶ್ರಮವಿದೆ ಎನ್ನುತ್ತಾರೆ ಗ್ರಂಥಾಲಯ ಅಧಿಕಾರಿ ಪುಂಡಲೀಕ ಕಲ್ಲಿಗನೂರ.
ಅವರು ಈ ಬಗ್ಗೆ ಹೇಳುವುದು ಹೀಗೆ:
ಎಲ್ಲರೂ ಕನಸು ಕಾಣುತ್ತಾರೆ. ಆದರೆ ಸೋಮಣ್ಣ ಅವರು ಕಾಣುವ ಕನಸೇ ಬೇರೆ. ಕರ್ನಾಟಕದಲ್ಲಿ ಮೊಟ್ಟಮೊದಲ ಡಿಜಿಟಲ್ ಗ್ರಂಥಾಲಯ ಸ್ಥಾಪನೆಯಾಗಿದ್ದು ಬೆಂಗಳೂರಿನ ವಿಜಯನಗರದ ಆರ್ ಪಿ ಸಿ ಲೇಔಟ್ ನ ಹಂಪಿ ನಗರದಲ್ಲಿ. ಅದಕ್ಕೆ ಕಾರಣಕರ್ತರು ಸೋಮಣ್ಣನವರು. ಹಾಗೆ ನೋಡಿದರೆ ಡಿಜಿಟಲ್ ಗ್ರಂಥಾಲಯದ ಕನಸು ಇಲಾಖೆಯ ಮುಖ್ಯ ಗ್ರಂಥಾಲಯಾಧಿಕಾರಿ ಆಗಿದ್ದ ಪಿ ವೈ ರಾಜೇಂದ್ರ ಕುಮಾರ್ ಅವರದಾಗಿತ್ತು. ಈ ಗ್ರಂಥಾಲಯದ ಮಹತ್ವ ಅರಿತ ಸೋಮಣ್ಣ ಅವರು ಈ ಯೋಜನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಮಹಾನಗರಪಾಲಿಕೆಯ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಿದರು. ಗ್ರಂಥಾಲಯ ಯೋಜನೆಯ ಬೆನ್ನೆಲುಬಾಗಿ ನಿಂತರು. ಹಂಪಿನಗರದ ಡಿಜಿಟಲ್ ಗ್ರಂಥಾಲಯ ಇರುವ ಜಾಗ ಪಾಳುಬಿದ್ದ ಜಾಗವಾಗಿತ್ತು. ಅದನ್ನು ಹಗಲುರಾತ್ರಿ ನಿಂತು ಸೋಮಣ್ಣ ಅವರು ಸರಿಪಡಿಸಿದರು. ಅದ್ಭುತವಾದ ಕಟ್ಟಡವನ್ನು ಗ್ರಂಥಾಲಯ ವಿಜ್ಞಾನದ ತಳಹದಿಯ ಮೇಲೆ ಕಟ್ಟಿಸಿದರು. ಈ ಗ್ರಂಥಾಲಯ ಏಷ್ಯಾದಲ್ಲೇ ಅತ್ಯಂತ ಆಧುನಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಗೋವಿಂದರಾಜ ನಗರದಲ್ಲಿಯೂ ಐಎಎಸ್, ಕೆಎಎಸ್ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ವಿಶೇಷ ಗ್ರಂಥಾಲಯವನ್ನು ಸೋಮಣ್ಣ ಅವರು ಸ್ಥಾಪಿಸಿದರು. ಗ್ರಂಥಾಲಯ ಇಲಾಖೆಯ ಸಂಪೂರ್ಣ ಪ್ರಯೋಜನವನ್ನು ತಮ್ಮ ಕ್ಷೇತ್ರದ ಜನರಿಗೆ ಮಾಡಿಕೊಟ್ಟರು. ಇಂಥ ಸುಸಜ್ಜಿತ ಗ್ರಂಥಾಲಯಗಳು ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲ. ಆಧುನಿಕ ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವ ವಿದ್ಯಾಲಯ ಎಂಬುದನ್ನು ಸೋಮಣ್ಣ ಅವರು ಸಾಧಿಸಿ ತೋರಿಸಿದರು.
ಯಾವುದೇ ಇಲಾಖೆಯ ಯಾವುದೇ ಯೋಜನೆಗಳನ್ನು ಮತ್ತು ಅದರ ಮಹತ್ವವನ್ನು ಬಹುಬೇಗ ಅರ್ಥ ಮಾಡಿಕೊಳ್ಳುವ ಜಾಣತನ ಸೋಮಣ್ಣ ಅವರಿಗಿದೆ. ಅದನ್ನು ಬಹುಬೇಗ ಅವರು ತಮ್ಮ ಕ್ಷೇತ್ರದ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದಕ್ಕಾಗಿ ಅವರು ಆಯಾ ಇಲಾಖೆಗಳ ಅಧಿಕಾರಿಗಳ ಮನವೊಲಿಸುತ್ತಾರೆ. ಅಗತ್ಯಬಿದ್ದರೆ ತರಾಟೆಗೆ ತೆಗೆದುಕೊಂಡಾದರೂ ಯೋಜನೆಗಳನ್ನು ಜಾರಿಗೆ ತರುತ್ತಾರೆ....
ಹಂಪಿನಗರದ ಅತ್ಯಾಧುನಿಕ ಈಜುಕೊಳ ಕೂಡ ಸೋಮಣ್ಣ ಅವರ ಅಮೂಲ್ಯ ಕೊಡುಗೆ. ಅಲ್ಲಿಯವರೆಗೆ ಜಯನಗರ ಮಾತ್ರ ಈಜುಕೊಳಕ್ಕೆ ಖ್ಯಾತಿ ಗಳಿಸಿತ್ತು. ಆ ಕೀರ್ತಿಯನ್ನು ಹಂಪಿನಗರಕ್ಕೆ ತಂದ ಹೆಗ್ಗಳಿಕೆ ಸೋಮಣ್ಣ ಅವರದು. ಹಾಗೆಯೇ ಹಲವಾರು ಅತ್ಯಾಧುನಿಕ ಕ್ರೀಡಾಂಗಣಗಳ ರೂವಾರಿ ಇವರು.