ಜನ ಸಂಪರ್ಕದ ಬೇರನ್ನು ಗಟ್ಟಿಯಾಗಿ ಉಳಿಸಿಕೊಂಡವರು ಮಾತ್ರ ರಾಜಕಾರಣದಲ್ಲಿ ಬಹುಕಾಲ ಜನಪ್ರಿಯರಾಗಿ ಉಳಿಯುತ್ತಾರೆ. ಶಾರ್ಟ್ ಕಟ್ ಬಳಸಿ ಬಂದವರು, ಗಾಡ್ ಫಾದರ್ ಗಳ ಕೃಪಾಕಟಾಕ್ಷದಿಂದ ಗೆದ್ದವರು, ಹಣ ಬಲದಿಂದ ಮಂತ್ರಿಯಾದವರು...ಇಂಥವರೆಲ್ಲ ಬಹುಬೇಗ ಮಿಂಚಿ ಮರೆಯಾಗುತ್ತಾರೆ. ಇದಕ್ಕೆ ರಾಜಕೀಯ ಚರಿತ್ರೆಯೇ ಸಾಕ್ಷಿ.
ಆದರೆ ವಿ ಸೋಮಣ್ಣ ಅವರು ಮೊದಲ ವರ್ಗಕ್ಕೆ ಸೇರುವವರು. ಜನ ಸಮೂಹದ ನಡುವಿನಿಂದ ನಾಯಕರಾಗಿ ಬೆಳೆದು ಬಂದವರು. ಹಾಗಾಗಿ 40 ವರ್ಷಗಳ ಬಳಿಕವೂ ಸೋಮಣ್ಣ ಅವರ ಪ್ರಭಾವ ಮತ್ತು ವರ್ಚಸ್ಸು ರಾಜ್ಯ ರಾಜಕಾರಣದಲ್ಲಿ ಪ್ರಖರವಾಗಿ ಉಳಿದಿದೆ.
ವಿ ಸೋಮಣ್ಣ ಅವರು ಅಕ್ಷರಶಃ ಹುಟ್ಟು ಹೋರಾಟಗಾರರು, ಛಲ ಬಿಡದ ಹಠವಾದಿ, ಅಷ್ಟೇ ಸರಳ ಜೀವಿ ಮತ್ತು ಜನಸಾಮಾನ್ಯರ ನೋವಿಗೆ ಸದಾ ಮಿಡಿಯುವವರು ಎಂಬುದು ಅವರ ಜೀವನದ ಹಾದಿಯತ್ತ ದೃಷ್ಟಿ ಹಾಯಿಸಿದಾಗ ಸ್ಪಷ್ಟವಾಗುತ್ತದೆ.
ನಾಡಿನ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ 'ನವ ಬೆಂಗಳೂರಿನ ನಿರ್ಮಾತೃ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅಸಾಮಾನ್ಯ ವಿದ್ಯಮಾನ. ಸೋಮಣ್ಣ ಅವರ ಬದುಕಿನ ಕಥನ ಯುವ ಸಮುದಾಯಕ್ಕೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾರತದ ಯುವ ಜನರಿಗೆ ಸ್ಫೂರ್ತಿದಾಯಕ ಜೀವನ ಪಾಠ.
ಅವರು ರಾಮನಗರ ಜಿಲ್ಲೆಯ ಮರಳವಾಡಿ ಎಂಬ ಸಣ್ಣ ಊರಿನ ತೇರಬೀದಿಯಿಂದ ಬೆಂಗಳೂರೆಂಬ ರಾಜಬೀದಿಯಲ್ಲಿ ಅಂಬೆಗಾಲಿಟ್ಟು, ಜನತಾ ಬಜಾರ್ ನಿಂದ ಜನತಾಪಕ್ಷಕ್ಕೆ ಪ್ರವೇಶ ಪಡೆದು, ಕಾರ್ಪೊರೇಟರ್ ಆಗಿ ಲೋಕಲ್ ಲೀಡರ್ ಎಂದು ಗುರುತಿಸಿಕೊಂಡು, ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದು, ಸಚಿವರಾಗಿ ಇಡೀ ರಾಜ್ಯ ಗುರುತಿಸುವಂಥ ಕೆಲಸ ಮಾಡುವ ಮೂಲಕ ನಾಡಿನ ಮುಂಚೂಣಿ ರಾಜಕೀಯ ಧುರೀಣ ಎಂದು ಅವರು ಖ್ಯಾತಿ ಗಳಿಸಿರುವುದು ರಾಜ್ಯ ರಾಜಕೀಯ ಚರಿತ್ರೆಯಲ್ಲಿನ ಅಚ್ಚಳಿಯದ ಅಧ್ಯಾಯ.
ಶಿಸ್ತು, ಶ್ರದ್ಧೆ, ನೇರ ನಡೆ-ನುಡಿ, ಸರಳ ಸಜ್ಜನಿಕೆ, ಎನಗಿಂತ ಕಿರಿಯರಿಲ್ಲ ಎಂಬ ನಿನಮ್ರತೆ, ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ, ಜನ ಸಾಮಾನ್ಯರ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಸ್ಪಂದಿಸುವ ಗುಣ, ಅಭಿವೃದ್ಧಿ ಕುರಿತ ದೂರದೃಷ್ಟಿ, ಅಧ್ಯಯನ ಪ್ರವೃತ್ತಿ, ಜಾತಿ ಧರ್ಮ ಜನಾಂಗದ ಸೀಮಾ ರೇಖೆಯನ್ನು ದಾಟಿ ಜನರೊಂದಿಗೆ ಬೆರೆಯುವಿಕೆ, ದ್ವೇಷ ಅಸೂಯೆ ಮದ ಮತ್ಸರಗಳಿಂದ ದೂರವಿದ್ದು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿಷ್ಠೆ, ಆದರೆ ನಾಲ್ಕು ಜನರಿಗೆ ಒಳಿತಾಗುತ್ತದೆ ಎಂದೆನಿಸಿದರೆ ಸಾಮ ದಾನ ಭೇದ ದಂಡ ಅಸ್ತ್ರ ಪ್ರಯೋಗಿಸಲೂ ಹಿಂಜರಿದ ದಿಟ್ಟತನ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತೋಪದೇಶದ ಪಾಲನೆ, ಸರ್ವ ಜಾತಿ-ಧರ್ಮಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರ...
ಯಾವುದೇ ಒಬ್ಬ ಜನಪ್ರತಿನಿಧಿಯನ್ನು ಅಂತಿಮವಾಗಿ ಗೆಲ್ಲಿಸುವುದು ಆತ ಗಳಿಸಿದ ಜನ ಪ್ರೀತಿ ಮತ್ತು ಆತನ ಸೇವಾ ವೈಖರಿಯ ರೀತಿ
-ನರೇಂದ್ರ ಮೋದಿ, ಪ್ರಧಾನಿ
ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ದೇವರು ರೂಪಿಸುತ್ತಾನೆ ಎಂದು ಕಾಯುತ್ತ ಕೂರಬಾರದು.
- ವಿ ಸೋಮಣ್ಣ, ಸಚಿವರು
ಹೀಗೆ ಹತ್ತು ಹಲವಾರು ಹೆಚ್ಚುಗಾರಿಕೆಗಳು ಸೋಮಣ್ಣ ಅವರನ್ನು ಇಂದು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ. ಹಾಗಾಗಿಯೇ ಅವರ ರಾಜಕೀಯ ಯಶಸ್ಸಿನ ಹಾದಿ ಯುವ ರಾಜಕಾರಣಿಗಳಿಗೆ ಪಾಠವೂ ಹೌದು.
ಮರಳವಾಡಿ ಎಂಬ ಕುಗ್ರಾಮದಿಂದ ಬದುಕಿನ ದಾರಿ ಹುಡುಕುತ್ತ ತಾವು ಬೆಂಗಳೂರಿಗೆ ಬಂದ ಕತೆಯನ್ನು ಸೋಮಣ್ಣ ಅವರ ಮಾತಿನಲ್ಲೇ ಕೇಳಲು ಚೆಂದ:
ಊರಲ್ಲಿ ಪಿಯುಸಿ ಮುಗಿಯುತ್ತಿದ್ದಂತೆ, ಅದ್ಯಾವುದೋ ಹೊಸ ದಿಕ್ಕಿನತ್ತ ನನ್ನ ಮನಸ್ಸು ತುಡಿಯುತ್ತಿತ್ತು. ಊರು ಬಿಟ್ಟು ಬೆಂಗಳೂರಿಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಆದರೆ ಮನೆಯಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಊರು ಬಿಟ್ಟೆ. ಜೇಬಿನಲ್ಲಿ ಅಮ್ಮ ಕೊಟ್ಟ 15 ರೂ. ಇತ್ತು. ಇದರೊಂದಿಗೆ ಇನ್ನೊಂದು ಜತೆ ಬಟ್ಟೆಯ ಸಣ್ಣ ಬ್ಯಾಗು.
ಬೆಂಗಳೂರಿನಲ್ಲಿ ಬಸಪ್ಪ ಸರ್ಕಲ್ ನಲ್ಲಿ ಬಂದು ಇಳಿದೆ. ನನಗಾಗ 18 ವರ್ಷ. ಅಲ್ಲೇ ಪಕ್ಕದಲ್ಲಿ ಸಣ್ಣ ಧೋಬಿ ಅಂಗಡಿ ಇಟ್ಟುಕೊಂಡಿದ್ದ ನಾಗಣ್ಣ ಎಂಬುವರು ನನ್ನನ್ನು ಗುರುತಿಸಿ, ಏನ್ ಸೋಮಣ್ಣ ಇಲ್ಲಿ ಎಂದರು. ಅಣ್ಣಾ ಏನಾದರು ಒಂದು ದಾರಿ ತೋರಿಸು ಅಣ್ಣಾ ಎಂದು ಅವರಿಗೆ ದುಂಬಾಲು ಬಿದ್ದೆ. ಅವರು ಸೀದಾ ನನ್ನನ್ನು ಚಂಗಲ್ ರಾಯ ಶೆಟ್ಟಿ ಎಂಬುವರ ಬಳಿ ಕರೆದೊಯ್ದರು. ಅವರದು ಮೋಟಾರ್ ರಿಪೇರಿ ಅಂಗಡಿ. ಹುಡುಗಾ ನನ್ನ ಜತೆಗೇ ಇದ್ದುಬಿಡು ಎಂದರವರು. ತಮ್ಮ ಅಂಗಡಿಯಲ್ಲೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟರು. ಮೋಟಾರು ಬಿಡಿ ಭಾಗಗಳನ್ನು ಎತ್ತಿ ಕೊಡುವುದು, ಅವರು ಕರೆದಲ್ಲಿಗೆ ಹೋಗುವುದು...ಇಷ್ಟೇ ನನ್ನ ಕೆಲಸ.
ಕೆಲ ದಿನಗಳ ಬಳಿಕ ಸಿಂಗಲ್ ರೂಮಿನ ಮನೆಯೊಂದಕ್ಕೆ ಶಿಫ್ಟ್ ಆದೆ. ಕೇವಲ ಆರಡಿ ಎಂಟಡಿ ಅಳತೆಯ ಸೀಟಿನ ಮನೆ ಅದು. ಬಾಡಿಗೆ ತಿಂಗಳಿಗೆ ಕೇವಲ 7 ರೂಪಾಯಿ!
ನಾನು ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಅದನ್ನು ಪಾಸ್ ಮಾಡಿಕೊಂಡೆ. ಆಗೆಲ್ಲ ಪಿಯುಸಿ ಅಂದರೆ ಒಂದೇ ವರ್ಷ. ಹಗಲು ಮೋಟಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಿವಿ ಪುರಂ ಸಂಜೆ ಕಾಲೇಜು ಸೇರಿದೆ. ರಾತ್ರಿಯಿಡೀ ಕಷ್ಟಪಟ್ಟು ಓದಿ ಪದವಿಯಲ್ಲಿ ಒಳ್ಳೆಯ ಅಂಕ ಗಳಿಸಿದೆ.
ಮುಂದೆ ಧೋಬಿ ಅಂಗಡಿಯ ನಾಗಣ್ಣ ನನ್ನನ್ನು ಜಯಸಿಂಹ ಎಂಬುವವರನ್ನು ಪರಿಚಯಿಸಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದರು. ನಾಗಣ್ಣ ಬಲು ಬುದ್ಧಿವಂತ ಮತ್ತು ಶ್ರಮಜೀವಿ. ನನ್ನ ಬದುಕಿನ ಆರಂಭದ ದಿನಗಳಲ್ಲಿ ನನಗೆ ಆಸರೆಯಾಗಿ ನಿಂತರು. ನಂತರ 1971ರಲ್ಲಿ ನಾನು ಕನ್ಷುಮರ್ ಫೆಡರೇಷನ್ ಗೆ ಅರ್ಜಿ ಸಲ್ಲಿಸಿದೆ. ಗುಮಾಸ್ತನ ಕೆಲಸ ಗಿಟ್ಟಿಸುವುದು ಆ ದಿನಗಳಲ್ಲಿ ನನ್ನ ಮಹತ್ವಾಕಾಂಕ್ಷೆಯಾಗಿತ್ತು! ಎ ಶಾಂತಮಲ್ಲಪ್ಪ ಅವರು ಫೆಡರೇಷನ್ ನ ಅಧ್ಯಕ್ಷರಾಗಿದ್ದರು. ಅವರು ಸಂದರ್ಶನ ತಗೊಂಡು, ''ಗುಮಾಸ್ತನ ಕೆಲಸ ಬೇಡ ನಿನಗೆ. ಸೇಲ್ಸ್ ಅಸಿಸ್ಟೆಂಟ್ ಕೆಲಸಕ್ಕೆ ಬಾ'' ಎಂದರು.
ಕೆಲಸಕ್ಕೆ ಸೇರಲು 500 ರೂ. ಡಿಪಾಸಿಟ್ ಕಟ್ಟಬೇಕಿತ್ತು. ಅಷ್ಟು ದುಡ್ಡು ಹೊಂದಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಊರಲ್ಲಿ ಹೋಗಿ ಕೇಳಿದರೆ, ಏಯ್ ಇಲ್ಲಿ ಬೇಸಾಯ ಮಾಡಿಕೊಂಡಿರು. ಬೆಂಗಳೂರಿಗೆ ಯಾಕೆ ಹೋಗಬೇಕು ನೀನು ಎಂದರು. ಕೊನೆಗೆ ಅಮ್ಮ 200 ರೂ. ಕೊಟ್ಟು ಕಳಿಸಿದರು. ಬೆಂಗಳೂರಿನ ಶಿವಾಜಿ ಟಾಕೀಸ್ ಬಳಿ ಆಗ ಉರುವಲು ಕಟ್ಟಿಗೆ ಮಾರುವ ವೇ ಬ್ರಿಡ್ಜ್ ಇತ್ತು. ಅಲ್ಲಿ ತಿಮ್ಮಯ್ಯ ಎಂಬೊಬ್ಬರ ಪರಿಚಯವಾಗಿತ್ತು. ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ 500 ರೂ. ಕೊಟ್ಟರು. ಅಂತೂ ಬೆಂಗಳೂರಿನ ಕೆ ಜಿ ರೋಡ್ ನ ಜನತಾ ಬಜಾರ್ ನಲ್ಲಿ ಕೆಲಸ ಶುರು ಮಾಡಿದೆ. ಅಲ್ಲಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು.
ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ, ಇನ್ನಷ್ಟು ದುಡಿಯಬೇಕು ಎಂದೆನಿಸುತ್ತಿತ್ತು. ಅದೇ ಹೊತ್ತಿಗೆ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಎಂಬುವರ ಪರಿಚಯವಾಯಿತು. ಇನ್ನು ಏನಾದರು ಮಾಡಬೇಕಲ್ಲ ಸರ್ ನಾನು ಅಂದೆ. ಪಿಗ್ಮಿ ಕಲೆಕ್ಟ್ ಮಾಡು ನೀನು ಎಂದು ಸಲಹೆ ನೀಡಿದರು. ಮಧ್ಯಾಹ್ನ 1.30ರಿಂದ 4 ಗಂಟೆಯವರೆಗಿನ ಬಿಡುವಿನ ಅವಧಿಯಲ್ಲಿ ಅಂಗಡಿ ಅಂಗಡಿ ತಿರುಗಿ ಪಿಗ್ಮಿ ಕಲೆಕ್ಟ್ ಮಾಡತೊಡಗಿದೆ. ಸಂಜೆ ಡ್ಯೂಟಿ ಮುಗಿದ ಮೇಲೆ ರಾತ್ರಿ 9 ಗಂಟೆವರೆಗೆ ಮತ್ತೆ ಇದೇ ಕೆಲಸ. ಇದರಿಂದ ತಿಂಗಳಿಗೆ ಸುಮಾರು 2 ಸಾವಿರ ರೂ. ಹೆಚ್ಚುವರಿ ಆದಾಯ ಬರತೊಡಗಿತು. ಜನತಾ ಬಜಾರ್ ಸಂಬಳ ಹೆಚ್ಚು ಕಡಿಮೆ ಇಷ್ಟೇ ಬರುತ್ತಿತ್ತು.